4:45 PM Thursday 18 - December 2025

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರೀತಿ ಹೆಸರಲ್ಲಿ ವಂಚಿಸಿದ ಕಾಮುಕನ ಸಹಿತ ಮೂವರ ಬಂಧನ

magadi gang rape case
18/12/2025

ಮಾಗಡಿ: ಪ್ರೀತಿಯ ನಾಟಕವಾಡಿ, ನಂಬಿದ ಯುವತಿಯನ್ನು ಬ್ಲಾಕ್‌ ಮೇಲ್ ಮಾಡುವ ಮೂಲಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳನ್ನು ರಾಮನಗರ ಜಿಲ್ಲೆಯ ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಕಾಸ್ (25), ಪ್ರಶಾಂತ್ (19) ಮತ್ತು ಚೇತನ್ (28) ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಪರಿಚಯ ಮಾಡಿಕೊಂಡಿದ್ದ ವಿಕಾಸ್ ಎಂಬಾತ, ಆಕೆಯನ್ನು ಪ್ರೀತಿಸುತ್ತಿರುವುದಾಗಿ ನಂಬಿಸಿದ್ದ. ಈ ಸಲುಗೆಯನ್ನು ಬಳಸಿಕೊಂಡು ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ವಿಕಾಸ್, ಆಕೆಗೆ ತಿಳಿಯದಂತೆ ಆ ಕ್ಷಣಗಳನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದ.

ವಿಡಿಯೊ ಮುಂದಿಟ್ಟು ಬ್ಲಾಕ್‌ ಮೇಲ್: ಕೆಲ ದಿನಗಳ ನಂತರ ತನ್ನ ಅಸಲಿ ರೂಪ ತೋರಿಸಿದ ವಿಕಾಸ್, ಈ ವಿಡಿಯೊವನ್ನು ಇನ್‌ ಸ್ಟಾಗ್ರಾಂ ಮೂಲಕ ವಿದ್ಯಾರ್ಥಿನಿಗೆ ಕಳುಹಿಸಿ ಬ್ಲಾಕ್‌ ಮೇಲ್ ಮಾಡಲು ಆರಂಭಿಸಿದ್ದಾನೆ. “ನನ್ನ ಸ್ನೇಹಿತರೊಂದಿಗೂ ದೈಹಿಕವಾಗಿ ಸಹಕರಿಸಬೇಕು, ಇಲ್ಲದಿದ್ದರೆ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದ.  ವಿಡಿಯೊ ಬಹಿರಂಗವಾದರೆ ಕುಟುಂಬದ ಗೌರವಕ್ಕೆ ಧಕ್ಕೆಯಾಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿನಿ ಆರೋಪಿಗಳು ಹೇಳಿದ ಸ್ಥಳಕ್ಕೆ ತೆರಳಿದ್ದಳು. ಈ ವೇಳೆ ವಿಕಾಸ್ ಮತ್ತು ಆತನ ಸ್ನೇಹಿತರಾದ ಪ್ರಶಾಂತ್ ಹಾಗೂ ಚೇತನ್ ಸೇರಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಷ್ಟಕ್ಕೆ ಸುಮ್ಮನಾಗದ ಕಾಮುಕರು, ಈ ಕೃತ್ಯವನ್ನೂ ವಿಡಿಯೊ ಚಿತ್ರೀಕರಿಸಿಕೊಂಡು ಮತ್ತೆ ಬ್ಲಾಕ್‌ ಮೇಲ್ ಮುಂದುವರಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್: ಆರೋಪಿಗಳ ಕಿರುಕುಳ ತಾಳಲಾರದೆ ಸಂಕಷ್ಟದಲ್ಲಿದ್ದ ಯುವತಿಗೆ ಮತ್ತೊಂದು ಆಘಾತ ಕಾದಿತ್ತು. ಪ್ರಮುಖ ಆರೋಪಿ ವಿಕಾಸ್, ಇತ್ತೀಚೆಗೆ ಈ ಕೃತ್ಯದ ವಿಡಿಯೊವನ್ನು ಇನ್‌ ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದ. ವಿಷಯ ತಿಳಿದು ತೀವ್ರ ಆಘಾತಕ್ಕೊಳಗಾದ ವಿದ್ಯಾರ್ಥಿನಿ, ಅಂತಿಮವಾಗಿ ಧೈರ್ಯ ಮಾಡಿ ತನ್ನ ಪೋಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ವಿದ್ಯಾರ್ಥಿನಿಯ ಕುಟುಂಬಸ್ಥರು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಅವರನ್ನು ಭೇಟಿ ಮಾಡಿ ದೂರು ನೀಡಿದರು. ಪ್ರಕರಣದ ಗಂಭೀರತೆಯನ್ನು ಅರಿತ ಎಸ್‌ಪಿ ಅವರು ಕೂಡಲೇ ಕ್ರಮಕ್ಕೆ ಆದೇಶಿಸಿದರು. ಇನ್‌ ಸ್ಪೆಕ್ಟರ್ ಗಿರಿರಾಜ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಮೂವರನ್ನೂ ಬಂಧಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version