ಮಂಗಳೂರು: ಸಂಡೆ ಬಜಾರ್ ವ್ಯಾಪಾರಿಗಳ ಮೇಲೆ ಮುಂದುವರಿದ ಪಾಲಿಕೆ ದಾಳಿ; ಸಿಐಟಿಯು ನೇತೃತ್ವದಲ್ಲಿ ರಸ್ತೆ ತಡೆದು ತೀವ್ರ ಪ್ರತಿಭಟನೆ

mangalore protest
05/07/2026

ಮಂಗಳೂರು: ನಗರದ ಪುರಭವನದ ಬಳಿ ಭಾನುವಾರ ರಜಾದಿನಗಳಂದು ವ್ಯಾಪಾರ ನಡೆಸುವ ‘ಸಂಡೆ ಬಜಾರ್’ ಬೀದಿಬದಿ ವ್ಯಾಪಾರಿಗಳ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ತೆರವು ಕಾರ್ಯಾಚರಣೆಯನ್ನು ಇಂದೂ ಮುಂದುವರಿಸಿದ್ದಾರೆ. ಪಾಲಿಕೆಯ ಈ ಕ್ರಮವನ್ನು ಖಂಡಿಸಿ ವ್ಯಾಪಾರಿಗಳು ಸಿಐಟಿಯು ನೇತೃತ್ವದಲ್ಲಿ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಭಾನುವಾರ ಬೆಳಗ್ಗೆ ಎಂದಿನಂತೆ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಂತೆಯೇ, ಮಹಾನಗರ ಪಾಲಿಕೆ ಆಯುಕ್ತರು ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳಿಗೆ ಆದೇಶ ನೀಡಿದರು. ಈ ವೇಳೆ ಪಾಲಿಕೆ ಆಯುಕ್ತರ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವ್ಯಾಪಾರಿಗಳು, “ಪಾದಚಾರಿಗಳ ಮುಕ್ತ ಓಡಾಟಕ್ಕೆ ರಸ್ತೆಯಲ್ಲಿ ಬೇಕಾದಷ್ಟು ಜಾಗ ಬಿಟ್ಟೇ ನಾವು ವ್ಯಾಪಾರ ಮಾಡುತ್ತಿದ್ದೇವೆ. ಹೀಗಿದ್ದರೂ ನಮ್ಮನ್ನು ಬಲವಂತವಾಗಿ ತೆರವುಗೊಳಿಸುತ್ತಿರುವುದು ಸರಿಯಲ್ಲ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಯುಕ್ತರು ದಾಳಿ ಮುಂದುವರಿಸಿದಾಗ ಆಕ್ರೋಶಗೊಂಡ ಬೀದಿಬದಿ ವ್ಯಾಪಾರಿಗಳು ಪಾಲಿಕೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಸ್ತೆ ತಡೆದು ಪ್ರತಿಭಟನೆಗೆ ಕುಳಿತರು.


“ಪಾಲಿಕೆ ಆಯುಕ್ತರು ಹಠಮಾರಿ ಧೋರಣೆ ತಳೆಯುತ್ತಾ ಬಡವರ ಮೇಲೆ ಸವಾರಿ ಮಾಡುವುದೇ ದೊಡ್ಡ ಸಾಧನೆ ಎಂದು ಭಾವಿಸಿದ್ದಾರೆ. ದೇಶದಲ್ಲಿ ಬೀದಿ ವ್ಯಾಪಾರಿಗಳ ರಕ್ಷಣೆಗಾಗಿ ಇರುವ ಕಾನೂನನ್ನು ಸರಿಯಾಗಿ ಅನುಷ್ಠಾನ ಮಾಡದೆ, ಈ ರೀತಿ ಏಕಾಏಕಿ ದಾಳಿ ನಡೆಸುತ್ತಿರುವುದು ಆಶ್ಚರ್ಯ ತಂದಿದೆ.”

— ಬಿ.ಕೆ. ಇಮ್ತಿಯಾಜ್, ಗೌರವಾಧ್ಯಕ್ಷರು, ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು)


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, “ಪಾಲಿಕೆ ಅಧಿಕಾರಿಗಳು ಬಡ ವ್ಯಾಪಾರಿಗಳ ಮೇಲೆ ಕನಿಷ್ಠ ಸೌಜನ್ಯವನ್ನೂ ತೋರಿಸುತ್ತಿಲ್ಲ. ಅಮಾನವೀಯವಾಗಿ ದಾಳಿ ನಡೆಸಿ ಅವರ ಜೀವನೋಪಾಯಕ್ಕೆ ಆಧಾರವಾಗಿರುವ ಸರಕುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ತಕ್ಷಣವೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಬಡವರ ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಪ್ರಮುಖರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್. ಎಸ್, ಮೊಹಮ್ಮದ್ ಮುಸ್ತಫಾ, ಅಬ್ದುಲ್ ರಹಿಮಾನ್ ಅಡ್ಯಾರ್, ವಿಜಯ್ ಜೈನ್, ಹಂಝ ಮೊಹಮ್ಮದ್, ಎಂ.ಎನ್ ಶಿವಪ್ಪ, ನೌಶಾದ್ ಉಳ್ಳಾಲ, ಶಿವಾನಂದ ನಾಯ್ಕ್, ಪಕೀರ ನಾಯ್ಕ್, ನಾಗರಾಜ್, ಹನುಮಂತ, ಜ್ಯೋತಿಬಾಯಿ, ಲಕ್ಕಮ್ಮ, ಸಯ್ಯದ್ ಸಾದಿಕ್, ಅಶ್ರಫ್, ನೌಶಾದ್ ಕಣ್ಣೂರ್, ರಫೀಕ್ ಪಾಂಡೇಶ್ವರ ಹಾಗೂ ಜನವಾದಿ ಮಹಿಳಾ ಸಂಘಟನೆಯ ನಗರ ಕಾರ್ಯದರ್ಶಿ ಯೋಗೀತಾ ಸುವರ್ಣ ಸೇರಿದಂತೆ ನೂರಾರು ವ್ಯಾಪಾರಿಗಳು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version