ಕಿಡ್ನಾಪ್ ಆದ ವಿದ್ಯಾರ್ಥಿಗಳು ಶವವಾಗಿ ಪತ್ತೆ: ಪ್ರಮುಖ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಕೊಡುತ್ತೇವೆ ಎಂದ ಮಣಿಪುರ ಸಿಎಂ

01/10/2023

ಅಪಹರಣಕ್ಕೊಳಗಾದ ಇಬ್ಬರು ವಿದ್ಯಾರ್ಥಿಗಳ ಸಾವಿನ ಹಿಂದಿನ ಪ್ರಮುಖ ಅಪರಾಧಿಗಳನ್ನು ಚುರಾಚಂದ್ಪುರ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ಹೇಳಿದ್ದಾರೆ. ಫಿಜಾಮ್ ಹೇಮ್ಜಿತ್ (20) ಮತ್ತು ಹಿಜಾಮ್ ಲಿಂಥೋಯಿಂಗಾಂಬಿ (17) ಎಂಬ ಇಬ್ಬರು ವಿದ್ಯಾರ್ಥಿಗಳ ಸಾವು ಸೆಪ್ಟೆಂಬರ್ 25 ರಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಬೆಳಕಿಗೆ ಬಂದಿತ್ತು.

ಈ ಹತ್ಯೆಯ ಹಿಂದಿರುವ ಅಪರಾಧಿಗಳಿಗೆ “ಮರಣದಂಡನೆ ಸೇರಿದಂತೆ ಗರಿಷ್ಠ ಶಿಕ್ಷೆ” ನೀಡಲಾಗುವುದು ಎಂದು ರಾಜ್ಯ ಸರ್ಕಾರ ಖಚಿತಪಡಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು ಜುಲೈ 6 ರಿಂದ ಕಾಣೆಯಾಗಿದ್ದರು. ಇಂಟರ್ ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಪುನರ್ ಸ್ಥಾಪಿಸಲಾಗುವುದು ಎಂದು ರಾಜ್ಯ ಸರ್ಕಾರ ಸೆಪ್ಟೆಂಬರ್ 23 ರಂದು ಘೋಷಿಸಿದ ಕೆಲವು ದಿನಗಳ ನಂತರ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು.

ಮೇ ತಿಂಗಳಲ್ಲಿ ಮೈತೆಯಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಾಗ ರಾಜ್ಯದಲ್ಲಿ ಇಂಟರ್ ನೆಟ್ ಸೇವೆಗಳನ್ನು ಮೊದಲು ಸ್ಥಗಿತಗೊಳಿಸಲಾಗಿತ್ತು.
ಇಬ್ಬರು ವಿದ್ಯಾರ್ಥಿಗಳ ಸಾವಿನ ನಂತರ ರಾಜ್ಯದಲ್ಲಿ ಭಾರಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ನೂರಾರು ವಿದ್ಯಾರ್ಥಿಗಳು ಸೆಪ್ಟೆಂಬರ್ 26 ಮತ್ತು 27 ರಂದು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು.

ಪ್ರತಿಭಟನೆಯನ್ನು ಚದುರಿಸಲು ರಾಜ್ಯ ಪೊಲೀಸರು ಮತ್ತು ಕ್ಷಿಪ್ರ ಪಡೆ ಸೇರಿದಂತೆ ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಗಳು ಮತ್ತು ಹೊಗೆ ಬಾಂಬ್ ಗಳನ್ನು ಬಳಸಿದ್ದರಿಂದ ಕನಿಷ್ಠ 45 ಪ್ರತಿಭಟನಾಕಾರರು ಗಾಯಗೊಂಡಿದ್ದರು.

ಇತ್ತೀಚಿನ ಸುದ್ದಿ

Exit mobile version