ನಿನ್ಗೆ ಹೆರಿಗೆ ಆಗುವಾಗ ಆಸ್ಪತ್ರೆ ಕಟ್ಟಿಸ್ತೀನಿ: ಪತ್ರಕರ್ತೆ ರಾಧಾ ಹಿರೀಗೌಡರ್ ಗೆ ಸಚಿವ ಆರ್.ವಿ.ದೇಶಪಾಂಡೆ ಅವಮಾನ

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರು ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲದೇ ಕಂಗಾಲಾಗಿದ್ದಾರೆ. ಅವರಿಗೆ ಆಸ್ಪತ್ರೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಮನವಿ ಮಾಡಿದ ಕರ್ನಾಟಕದ ಹಿರಿಯ ಪತ್ರಕರ್ತೆಯೊಬ್ಬರಿಗೆ ಹಿರಿಯ ಕಾಂಗ್ರೆಸ್ ಮುಖಂಡ, ಸಚಿವ ಆರ್.ವಿ.ದೇಶಪಾಂಡೆ ಅಸಭ್ಯವಾಗಿ ಪ್ರತಿಕ್ರಿಯಿಸಿ ಅವಮಾನಿಸಿರುವ ಘಟನೆ ನಡೆದಿದೆ.
ಕಾಳಿ ನದಿಗೆ ಬಾಗಿನ ನೀಡಲು ಬಂದಿದ್ದ ಆರ್.ವಿ.ದೇಶಪಾಂಡೆ ಅವರಿಗೆ ಪ್ರಶ್ನೆ ಕೇಳಿದ್ದ ಗ್ಯಾರೆಂಟಿ ನ್ಯೂಸ್ ನ ಪ್ರಧಾನ ಸಂಪಾದಕಿ ರಾಧಾ ಹಿರೇಗೌಡರ್, ಸರ್ ನಿಮ್ಮ ಕ್ಷೇತ್ರಕ್ಕೆ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿಸಿಕೊಡಿ, ಇಲ್ಲಿ ನದಿಗಳೆಲ್ಲ ತುಂಬಿ ಹರಿಯುತ್ತಿದೆ. ಬಾಣಂತಿಯರು ಹೆರಿಗೆ ಮಾಡಿಸಿಕೊಳ್ಳಬೇಕಾದ್ರೆ ನೂರಾರು ಕಿ.ಮೀ. ಪ್ರಯಾಣಿಸಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಈ ವೇಳೆ ಆರ್.ವಿ.ದೇಶಪಾಂಡೆ, ನಿನ್ನ ಹೆರಿಗೆ ಸಮಯಕ್ಕೆ ಆಸ್ಪತ್ರೆ ಕಟ್ಟಿಸ್ತೀನಿ ಎಂದು ಉಡಾಫೆಯ ಉತ್ತರ ನೀಡಿ ವ್ಯಂಗ್ಯವಾಡಿದ್ದಾರೆ. ಮಹಿಳಾ ಪತ್ರಕರ್ತೆಯರ ಬಳಿ ಹೇಗೆ ಮಾತನಾಡಬೇಕು ಎನ್ನುವುದೂ ಇಷ್ಟು ಹಿರಿಯರಾಗಿರುವ ಆರ್.ವಿ.ದೇಶಪಾಂಡೆ ಅವರಿಗೆ ಗೊತ್ತಿಲ್ವಾ ಅಂತ ಘಟನೆಯ ಬಗ್ಗೆ ಪತ್ರಕರ್ತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಕು ಅಂತ ಈ ಹಿಂದಿನಿಂದಲೂ ಅಭಿಯಾನಗಳು ನಡೆಯುತ್ತಿವೆ. ಆದರೆ ಈವರೆಗೂ ಆ ಆಸ್ಪತ್ರೆಯ ಕನಸು ಹಾಗೆಯೇ ಉಳಿದಿದೆ. ಈ ಬಗ್ಗೆ ಪ್ರಶ್ನೆ ಕೇಳಿದರೆ, ಅದನ್ನೂ ವ್ಯಂಗ್ಯ ಮಾಡಿ ಮಾತನಾಡುತ್ತಿರುವುದು ಎಷ್ಟು ಸರಿ? ಹಿರಿಯರಾಗಿರುವ ಆರ್.ವಿ.ದೇಶಪಾಂಡೆ ಹಲವಾರ ಖಾತೆಗಳನ್ನು ನಿಭಾಯಿಸಿದವರು, ಪತ್ರಕರ್ತೆ ಜೊತೆಗೆ ಮಾತನಾಡುವಾಗ ಇಷ್ಟೊಂದು ಅಸಭ್ಯವಾದ ಮಾತು ಬೇಕಿತ್ತಾ? ಎನ್ನುವ ಪ್ರಶ್ನೆ ಕೇಳಿ ಬಂದಿದೆ. ಅವರು ತಕ್ಷಣವೇ ಕ್ಷಮೆ ಯಾಚಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD