ಚಿನ್ನದ ಬಂಗಾಳ, ಲೆಕ್ಕ ಚುಕ್ತಾ: ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಭಾಷಣ ಅಬ್ಬರ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಧಾಟಿ ಐದು ವರ್ಷಗಳಲ್ಲಿ ಸಂಪೂರ್ಣ ಬದಲಾಗಿದೆ. 2021ರಲ್ಲಿ ‘ಅಸಲ್ ಪರಿಬರ್ತನ್’ (ನಿಜವಾದ ಬದಲಾವಣೆ) ಮತ್ತು ‘ಸೋನಾರ್ ಬಾಂಗ್ಲಾ’ (ಚಿನ್ನದ ಬಂಗಾಳ) ಎಂಬ ಭರವಸೆ ನೀಡಿದ್ದ ಮೋದಿ, ಈಗ 2026ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ‘ಚುನ್ ಚುನ್ ಕೆ ಸಬ್ಕಾ ಹಿಸಾಬ್’ (ಎಲ್ಲರ ಲೆಕ್ಕ ಚುಕ್ತಾ ಮಾಡಲಾಗುವುದು) ಎಂಬ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.
ಶನಿವಾರ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿಶೇಷವೆಂದರೆ, ಈ ಬಾರಿಯ ಭಾಷಣದಲ್ಲಿ ಪ್ರಧಾನಿಯವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ಒಮ್ಮೆಯೂ ಪ್ರಸ್ತಾಪಿಸಲಿಲ್ಲ. ಬದಲಾಗಿ ಟಿಎಂಸಿ ಸರ್ಕಾರ, ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಮೇಲೆ ನೇರ ದಾಳಿ ನಡೆಸಿದರು.
“ನಾವು ಸಬ್ಕಾ ಸಾತ್ ಸಬ್ಕಾ ವಿಕಾಸ್ ಬಗ್ಗೆ ಮಾತನಾಡುತ್ತೇವೆ. ಆದರೆ ಇಂದು ನಾನು ಹೇಳುತ್ತಿದ್ದೇನೆ, ಪ್ರತಿಯೊಬ್ಬರ ಲೆಕ್ಕವನ್ನೂ ಚುಕ್ತಾ ಮಾಡಲಾಗುವುದು (ಸಬ್ಕಾ ಹಿಸಾಬ್ ಲಿಯಾ ಜಾಯೇಗಾ). ಭ್ರಷ್ಟಾಚಾರ ಮತ್ತು ಸಿಂಡಿಕೇಟ್ ವ್ಯವಸ್ಥೆಯಲ್ಲಿ ತೊಡಗಿರುವವರು ಜೈಲಿಗೆ ಹೋಗುವುದು ಖಚಿತ,” ಎಂದು ಗುಡುಗಿದರು.
ಈ ಚುನಾವಣೆ ಕೇವಲ ಸರ್ಕಾರ ಬದಲಾವಣೆಗಾಗಿ ಅಲ್ಲ, ಇದು ಬಂಗಾಳದ ಆತ್ಮವನ್ನು ಉಳಿಸಲು ಮತ್ತು ಭ್ರಷ್ಟ ವ್ಯವಸ್ಥೆಯಿಂದ ಮುಕ್ತಿ ಪಡೆಯಲು ನಡೆಯುತ್ತಿರುವ ಹೋರಾಟ ಎಂದು ಮೋದಿ ಬಣ್ಣಿಸಿದರು.
ಸಂದೇಶ್ಖಾಲಿ ಮತ್ತು ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಘಟನೆಗಳನ್ನು ಪ್ರಸ್ತಾಪಿಸಿದ ಅವರು, ಬಂಗಾಳದಲ್ಲಿ ಹೆಣ್ಣುಮಕ್ಕಳು ಸೂರ್ಯ ಮುಳುಗುವ ಮೊದಲೇ ಮನೆ ಸೇರಬೇಕಾದ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಟಿಎಂಸಿ ಸರ್ಕಾರವು ಬುಡಕಟ್ಟು ಸಮುದಾಯದ ಮಗಳಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಪಮಾನ ಮಾಡಿದೆ ಎಂದು ಮೋದಿ ಆರೋಪಿಸಿದರು.
2021ರ ಚುನಾವಣಾ ಸಮಯದಲ್ಲಿ ಪ್ರಧಾನಿ ಮೋದಿ ಮಮತಾ ಬ್ಯಾನರ್ಜಿ ಅವರನ್ನು ‘ದೀದಿ ಓ ದೀದಿ’ ಎಂದು ಕೆಣಕುತ್ತಿದ್ದರು. ಆಗ ‘ಅಸಲ್ ಪರಿಬರ್ತನ್’ ಎಂಬುದು ಪ್ರಮುಖ ಘೋಷಣೆಯಾಗಿತ್ತು. ಆದರೆ 2026ರ ಹೊತ್ತಿಗೆ ಮೋದಿ ಅವರ ಮಾತುಗಳು ಹೆಚ್ಚು ಆಕ್ರಮಣಕಾರಿಯಾಗಿದ್ದು, ಭ್ರಷ್ಟಾಚಾರದ ವಿರುದ್ಧ ‘ಲೆಕ್ಕ ಚುಕ್ತಾ’ ಮಾಡುವ ಎಚ್ಚರಿಕೆಯತ್ತ ವಾಲಿವೆ. ಬಂಗಾಳದಲ್ಲಿ ಟಿಎಂಸಿಯ ‘ಜಂಗಲ್ ರಾಜ್’ ಅಂತ್ಯಗೊಳ್ಳುವ ಕ್ಷಣಗಣನೆ ಆರಂಭವಾಗಿದೆ ಎಂದು ಮೋದಿ ಈ ಸಂದರ್ಭದಲ್ಲಿ ಘೋಷಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD






















