ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಸಮಾಧಾನ ಸ್ಫೋಟ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ಸ್ಥಳೀಯ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಂಡಿದೆ. ಶಾಸಕಿಯ ವಿರುದ್ಧ ಬರೋಬ್ಬರಿ 16 ಅಂಶಗಳ ದೂರಿನ ಪಟ್ಟಿಯನ್ನು ಸಿದ್ಧಪಡಿಸಿರುವ ಹಿರಿಯ ಮುಖಂಡರ ನಿಯೋಗ, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದೆ.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ 45ಕ್ಕೂ ಅಧಿಕ ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಹಿ ಹಾಕಿರುವ ದೂರು ಪತ್ರವನ್ನು ಹೈಕಮಾಂಡ್ ಗೆ ತಲುಪಿಸಿದ್ದಾರೆ.
ಕಾರ್ಯಕರ್ತರ ದೂರುಗಳೇನು?
ಮೂಲ ಕಾಂಗ್ರೆಸ್ಸಿಗರ ಕಡೆಗಣನೆ: ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ನಿರಂತರವಾಗಿ ದುಡಿದ ಹಿರಿಯ ಕಾರ್ಯಕರ್ತರನ್ನು ಶಾಸಕರು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ.
ಆರ್.ಎಸ್.ಎಸ್ ಮತ್ತು ಭಜರಂಗದಳದವರೊಂದಿಗೆ ಆಪ್ತತೆ: 2023ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಆರ್.ಎಸ್.ಎಸ್, ಭಜರಂಗದಳ ಹಾಗೂ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಬೆಂಬಲಿಗರೊಂದಿಗೆ ಶಾಸಕರು ಆಪ್ತತೆ ಹೊಂದಿದ್ದಾರೆ.
ಕಚೇರಿಗೆ ಭೇಟಿ ನೀಡಿಲ್ಲ: ನಯನಾ ಮೋಟಮ್ಮ ಅವರು ಶಾಸಕರಾದ ದಿನದಿಂದ ಇಂದಿನವರೆಗೂ ಮೂಡಿಗೆರೆ ಕಾಂಗ್ರೆಸ್ ಕಚೇರಿಗೆ ಬಂದಿಲ್ಲ ಹಾಗೂ ಯಾವುದೇ ಅಧಿಕೃತ ಸಭೆಗಳನ್ನು ನಡೆಸಿಲ್ಲ.
ಪಕ್ಷದ ಸೂಚನೆಗಳ ಉಲ್ಲಂಘನೆ: ಕೆಪಿಸಿಸಿ ವತಿಯಿಂದ ನೀಡಲಾಗುವ ಯಾವುದೇ ಪ್ರಮುಖ ಸೂಚನೆಗಳಾಗಲಿ ಅಥವಾ ಸಭೆಗಳಲ್ಲಾಗಲಿ ಶಾಸಕರು ಭಾಗಿಯಾಗುತ್ತಿಲ್ಲ.
ಸ್ವಪಕ್ಷೀಯರ ಕಡೆಗಣನೆ, ಹಿಂಬಾಲಕರಿಗೆ ಮಣೆ: ಮೂಲ ಕಾಂಗ್ರೆಸ್ಸಿಗರಿಗೆ ಯಾವುದೇ ಅವಕಾಶಗಳನ್ನು ನೀಡದೆ, ಕೇವಲ ತಮ್ಮ ಹಿಂಬಾಲಕರನ್ನೇ ಹೋಬಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೇವಲ 733 ಮತಗಳ ಅತ್ಯಲ್ಪ ಅಂತರದಿಂದ ಗೆದ್ದಿರುವ ನಯನಾ ಮೋಟಮ್ಮ ಅವರ ಈ ನಡೆಗಳು, ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಹಿನ್ನೆಡೆ ತರಲಿವೆ ಎಂದು ಹಿರಿಯ ನಾಯಕರು ಎಚ್ಚರಿಸಿದ್ದಾರೆ. ಸದ್ಯ ಮೂಡಿಗೆರೆ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ಈ ಬಂಡಾಯ ಶಮನಕ್ಕೆ ಕೆಪಿಸಿಸಿ ಅಧ್ಯಕ್ಷರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























