ಸಿನಿಮಾ ಸ್ಟೈಲ್ ಮರ್ಡರ್: ಕೊಲೆ ಬೆದರಿಕೆ ಹಾಕಿದ್ದ ರೌಡಿ ಶೀಟರ್‌ನನ್ನೇ ಮುಗಿಸಿದ ಹಳ್ಳಿ ಹೈದರು!
ಮಂಡ್ಯ: ಜಿಲ್ಲೆಯ ಪಾಂಡವಪುರದಲ್ಲಿ ನಡೆದ ರೌಡಿ ಶೀಟರ್ ಮಹೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಹಂತಕರ ಗ್ಯಾಂಗ್ ಅನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಸವರಾಜು, ಶಶಾಂಕ್, ಹೇಮಂತ್ ಕುಮಾರ್ ಮತ್ತು ಸುಮಂತ್ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ಕೊಲೆಯಾದ ಮಹೇಶ್ ಲಕ್ಷ್ಮೀಸಾಗರ ಗ್ರಾಮದ ನಿವಾಸಿಯಾಗಿದ್ದು, ಈತನ ಮೇಲೆ ಸುಮಾರು 8 ಕ್ರಿಮಿನಲ್ ಪ್ರಕರಣಗಳಿದ್ದವು. ಕಳೆದ ನವೆಂಬರ್ 29ರಂದು ಪಾಂಡವಪುರ ತಾಲ್ಲೂಕಿನ ಅಮೃತಿ ಗ್ರಾಮದ ಬಳಿ ಮಹೇಶ್ ತನ್ನ ಸ್ನೇಹಿತರೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ, ಓಮ್ನಿ ಕಾರಿನಲ್ಲಿ ಬಂದ ಹಂತಕರು ಮೊದಲು ಬೈಕ್‌ಗೆ ಗುದ್ದಿದ್ದಾರೆ. ನಂತರ ಸಿನಿಮಾ ಸ್ಟೈಲ್‌ನಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದರು.
ಕೊಲೆಗೆ ಕಾರಣ: ಮಹೇಶ್ ಈ ಹಿಂದೆ ಆರೋಪಿಗಳಾದ ಭೀಮ ಮತ್ತು ಬಸವರಾಜು ಅವರಿಗೆ ಹಲವು ಬಾರಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಮತ್ತೊಬ್ಬ ರೌಡಿ ಶೀಟರ್ ರೋಹಿತ್ ಜೊತೆ ಸ್ನೇಹ ಬೆಳೆಸಿದ್ದಕ್ಕೆ ಮಹೇಶ್ ಇವರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಜೀವಭಯದಿಂದಾಗಿ ತಾವೇ ಮೊದಲು ಮಹೇಶ್‌ನನ್ನು ಮುಗಿಸಲು ಸ್ಕೆಚ್ ಹಾಕಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಪೊಲೀಸ್ ಕಾರ್ಯಾಚರಣೆ: ಪ್ರಕರಣದ ಎ–1 ಆರೋಪಿ ಭೀಮ ಅಲಿಯಾಸ್ ಚಂದ್ರಶೇಖರ್ ಈಗಾಗಲೇ ನ್ಯಾಯಾಲಯಕ್ಕೆ ಶರಣಾಗಿದ್ದ. ಆತನ ವಿಚಾರಣೆಯ ವೇಳೆ ಉಳಿದ ಆರೋಪಿಗಳು ಬೆಂಗಳೂರಿನ ಜಿಗಿಣಿಯ ಲಾಡ್ಜ್ ಒಂದರಲ್ಲಿ ಅಡಗಿರುವ ಮಾಹಿತಿ ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಮೇಲುಕೋಟೆ ಪೊಲೀಸರು ಬೆಂಗಳೂರಿಗೆ ತೆರಳಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಡಿಪಾರಾಗಿದ್ದರೂ ರೌಡಿಸಂ ಬಿಡದ ಮಹೇಶ್ ಕೊಲೆಯಾಗಿ ಅಂತ್ಯ ಕಂಡರೆ, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಯುವಕರು ಜೈಲು ಪಾಲಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























