4:48 PM Thursday 18 - December 2025

ಊಟಕ್ಕೆ ಕರೆದು ಲೈಂಗಿಕ ಸಂಪರ್ಕ, ನಂತರ ಬ್ಲ್ಯಾಕ್ ಮೇಲ್: ಇನ್ಸ್‌ಪೆಕ್ಟರ್‌ಗೆ ಕಿರುಕುಳ ನೀಡಿದ್ದ ಮಹಿಳೆಯ ಕರಾಳ ಮುಖ ಅನಾವರಣ

honeytrap case
18/12/2025

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ‘ಚಿನ್ನಿ ಲವ್ ಯು’ ಎಂದು ಸಂದೇಶ ಕಳುಹಿಸಿ, ಪ್ರೀತಿಸುವಂತೆ ಪೀಡಿಸುತ್ತಿದ್ದ ವನಜಾ ಅಲಿಯಾಸ್ ಸಂಜನಾ ಎಂಬಾಕೆಯ ಅಸಲಿ ಮುಖ ಈಗ ಬಯಲಾಗಿದೆ. ಇನ್ಸ್‌ಪೆಕ್ಟರ್ ನೀಡಿದ ದೂರಿನ ಮೇರೆಗೆ ಬುಧವಾರ ಸಂಜೆ ಆಕೆಯನ್ನು ಬಂಧಿಸಲಾಗಿದ್ದು, ವಿಚಾರಣೆಯ ವೇಳೆ ಆಕೆ ಈ ಹಿಂದೆಯೂ ಇಂತಹ ಹಲವಾರು ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಆರೋಪಿ ಸಂಜನಾ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸ್ನೇಹ ಬೆಳೆಸುತ್ತಿದ್ದಳು. ಪರಿಚಯವಾದ ನಂತರ ಅವರನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿ, ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದಳು. ಈ ಸಂದರ್ಭದಲ್ಲಿ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರೀಕರಿಸಿಕೊಂಡು, ನಂತರ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣಗಳನ್ನು ವಸೂಲಿ ಮಾಡುತ್ತಿದ್ದಳು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಈ ಹಿಂದೆ ಸತೀಶ್ ರೆಡ್ಡಿ ಎಂಬ ಗುತ್ತಿಗೆದಾರನನ್ನು ಇದೇ ರೀತಿ ಹನಿಟ್ರ್ಯಾಪ್‌ಗೆ ಕೆಡವಿದ್ದ ಸಂಜನಾ, ಅವರಿಂದ ಮೂರು ಲಕ್ಷ ರೂಪಾಯಿ ನಗದು, ಚಿನ್ನದ ಸರ ಮತ್ತು ಉಂಗುರವನ್ನು ಕಸಿದುಕೊಂಡಿದ್ದಳು. ಅಷ್ಟೇ ಅಲ್ಲದೆ, ಅವರ ಎರಡು ಅಂತಸ್ತಿನ ಕಟ್ಟಡವನ್ನೇ ತನ್ನ ಹೆಸರಿಗೆ ಬರೆಸಿಕೊಳ್ಳಲು ಯತ್ನಿಸಿದ ಆರೋಪವೂ ಆಕೆಯ ಮೇಲಿದೆ. ಈ ಸಂಬಂಧ 2022ರಲ್ಲಿಯೂ ರಾಮಮೂರ್ತಿ ನಗರ ಮತ್ತು ಕೆ.ಆರ್. ಪುರಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಕೇವಲ ಉದ್ಯಮಿಗಳನ್ನಲ್ಲದೆ, ಪೊಲೀಸ್ ಅಧಿಕಾರಿಗಳನ್ನೂ ಈಕೆ ಬಿಟ್ಟಿರಲಿಲ್ಲ. 2018ರಲ್ಲಿ ದಾವಣಗೆರೆ ಮೂಲದ ಹೆಡ್ ಕಾನ್ಸ್‌ಟೇಬಲ್ ಒಬ್ಬರ ವಿರುದ್ಧ ಮದುವೆ ನೆಪದಲ್ಲಿ ವಂಚಿಸಿದ್ದಾರೆ ಎಂದು ಸುಳ್ಳು ದೂರು ನೀಡಿದ್ದಳು. ಆದರೆ ತನಿಖೆಯ ನಂತರ ಆ ದೂರು ಸುಳ್ಳೆಂದು ಸಾಬೀತಾಗಿ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದರು. ಇತ್ತೀಚೆಗೆ ತಾನು ಪೊಲೀಸ್ ಅಧಿಕಾರಿಯ ಪತ್ನಿ ಎಂದು ಹೇಳಿಕೊಂಡು ಸಾರ್ವಜನಿಕರನ್ನು ಬೆದರಿಸುತ್ತಿದ್ದ ವಿಚಾರವೂ ಈಗ ತನಿಖೆಯಲ್ಲಿ ಬಹಿರಂಗವಾಗಿದೆ.

ರಾಜಕೀಯ ನಾಯಕರ ಜೊತೆಗಿನ ಪ್ರಭಾವ ಬಳಸಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದ ಈಕೆ, ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ತನಗೆ ಪರಿಚಯ ಎಂದು ಹೇಳಿ ಬೆದರಿಸಿದ್ದಳು. ಪ್ರಸ್ತುತ ಬಂಧಿತಳಾಗಿರುವ ಸಂಜನಾಳ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈಕೆಯಿಂದ ವಂಚನೆಗೆ ಒಳಗಾದ ಇತರ ವ್ಯಕ್ತಿಗಳ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version