ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ AK–47 ನಿಂದ ಗುಂಡು ಹಾರಿಸಿದ ಪೊಲೀಸ್‌ ಅಮಾನತು!

bihar police
27/07/2026

ಪಾಟ್ನಾ / ಸೀವಾನ್: ನೀಟ್ (NEET) ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ನಡೆದ ‘ಬಿಹಾರ ಬಂದ್‌–Bihar Bandh’ ಪ್ರತಿಭಟನೆ ವೇಳೆ, ವಿದ್ಯಾರ್ಥಿಗಳ ಮೇಲೆ AK-47 ರೈಫಲ್‌ನಿಂದ ಗುಂಡು ಹಾರಿಸಿದ ಆರೋಪದ ಮೇಲೆ ಬಿಹಾರದ ಪೊಲೀಸ್ ಕಾನ್‌ ಸ್ಟೇಬಲ್‌ ನನ್ನು ಅಮಾನತುಗೊಳಿಸಲಾಗಿದೆ.

ಜುಲೈ 25 ರಂದು ಸೀವಾನ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಸಿಬ್ಬಂದಿ ಅಭಿಷೇಕ್ ಪಟೇಲ್, ಪ್ರತಿಭಟನಾಕಾರರತ್ತ AK–47 ನಿಂದ ಗುಂಡು ಹಾರಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ಬಿಹಾರ ಪೊಲೀಸ್ ಪ್ರಧಾನ ಕಚೇರಿ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಆದೇಶಿಸಿದೆ.

ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ‘ಬಿಹಾರ ಬಂದ್’ ವೇಳೆ ಹಲವು ಜಿಲ್ಲೆಗಳಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿತ್ತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದ್ದರು.

ಗುಂಡಿನ ಚಕಮಕಿಯಲ್ಲಿ 15 ವರ್ಷದ ಮೊಹಮ್ಮದ್ ಆರಿಫ್ ಸೇರಿದಂತೆ ಮೂವರು ಗಾಯಗೊಂಡಿದ್ದು, ಅವರನ್ನು ಪಾಟ್ನಾದ ಜಯಪ್ರಭಾ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ.


ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ಮತ್ತು AK–47 ಬಳಕೆ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸೀವಾನ್ ಎಸ್‌ ಪಿ ಪೂರಣ್ ಕುಮಾರ್ ಝಾ ಪ್ರತಿಕ್ರಿಯಿಸಿ, “ಪ್ರತಿಭಟನೆಯ ಸಂದರ್ಭದಲ್ಲಿ ಗುಂಡು ಹಾರಿಸದಂತೆ ಸ್ಪಷ್ಟ ಸೂಚನೆ ನೀಡಲಾಗಿತ್ತು. ನಿಯಮ ಉಲ್ಲಂಘಿಸಿರುವ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ವಿಸ್ತೃತ ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version