5.50 ಕೋಟಿ ರೂ. ಮೌಲ್ಯದ ಎಂಡಿಎಂಎ ದಂಧೆ: ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ನಾಪತ್ತೆ, ಪೊಲೀಸರಿಂದ ಬಲೆ

jaleel baba
27/07/2026

ಬೆಳ್ತಂಗಡಿ: ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾದ ಸುಮಾರು 5.50 ಕೋಟಿ ರೂಪಾಯಿ ಮೌಲ್ಯದ ಭಾರಿ ಪ್ರಮಾಣದ ಎಂಡಿಎಂಎ (MDMA) ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ, ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ ಎಂಬಾತನ ಮೇಲೆ ದೂರು ದಾಖಲಾಗಿದ್ದು, ಆತ ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದಾನೆ.

ಮಂಗಳೂರು ನಗರ ಅಪರಾಧ ವಿಭಾಗ (CCB) ಪೊಲೀಸರು ಮಂಗಳೂರಿನ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಜಲೀಲ್ ಬಾಬಾ ಹೆಸರನ್ನು ಆರೋಪಿಯನ್ನಾಗಿ ಸೇರ್ಪಡೆಗೊಳಿಸಿದ್ದು, ಆತನನ್ನು ದಸ್ತಗಿರಿ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಮಂಗಳೂರಿನ ಕುಲಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪ ಸಿಸಿಬಿ ಪೊಲೀಸರು ದಾಳಿ ನಡೆಸಿ, ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ 1.50 ಲಕ್ಷ ರೂ. ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಾದಕ ವಸ್ತು ಪೂರೈಕೆಯ ಬೃಹತ್ ಜಾಲದ ಸುಳಿವು ಸಿಕ್ಕಿತ್ತು. ಈ ಜಾಲವು ದೆಹಲಿಯಿಂದ ಎಂಡಿಎಂಎ ಖರೀದಿಸಿ ಬೆಂಗಳೂರಿಗೆ ಸಾಗಿಸುತ್ತಿತ್ತು.

ಬಳಿಕ ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದದ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ 5 ಕೆಜಿ 196 ಗ್ರಾಂ (ಸುಮಾರು 5.50 ಕೋಟಿ ರೂ. ಮೌಲ್ಯ) ಎಂಡಿಎಂಎ ಹಾಗೂ ಕಾರು, ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದರು.

ಆಂಬ್ಯುಲೆನ್ಸ್ ದುರ್ಬಳಕೆ:

ಬಂಧಿತರು ನೀಡಿದ ಮಾಹಿತಿಯಂತೆ, ದೆಹಲಿಯಿಂದ ತರಲಾಗುತ್ತಿದ್ದ ಎಂಡಿಎಂಎ ಅನ್ನು ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳಕ್ಕೆ ಪೂರೈಸಲಾಗುತ್ತಿತ್ತು. ಈ ಅಕ್ರಮ ಸಾಗಾಟ ಮತ್ತು ವಿತರಣೆಗೆ ಜಲೀಲ್ ಬಾಬಾ ತನ್ನ ಆಂಬ್ಯುಲೆನ್ಸ್ ವಾಹನವನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಈಗಾಗಲೇ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಉಜಿರೆ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ (28), ಇಂದಬೆಟ್ಟು ದೇವನಾರಿಯ ಅಲ್ತಾಜ್ ಮತ್ತು ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ವಿರುದ್ಧ ಪ್ರಕರಣ ದಾಖಲಾಗಿದ್ದು, ಮನುವನ್ನು ಜೈಲಿಗಟ್ಟಲಾಗಿದೆ.

ಪೊಲೀಸರಿಂದ ತೀವ್ರ ಶೋಧ:

ಜಲೀಲ್ ಬಾಬಾ ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದು, ಆತನ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿದೆ. ತುರ್ತು ಕರೆಗಳಿಗೂ ಆತ ಲಭ್ಯವಿಲ್ಲ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಎಸ್.ಪಿ ಹಾಗೂ ಕಮಿಷನರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡವು ಜಲೀಲ್ ಬಾಬಾನ ಬಂಧನಕ್ಕಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version