ರೀಲ್ಸ್ ನೋಡುತ್ತಾ ಕುಳಿತ ಜೈಲು ಸಿಬ್ಬಂದಿ: ಗೋಡೆ ಹತ್ತಿ ಪರಾರಿಯಾದ ರೇಪ್ ಪ್ರಕರಣದ ಖೈದಿ!
ಬರೇಲಿ (ಉತ್ತರ ಪ್ರದೇಶ): ಜೈಲಿನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳು ಮೊಬೈಲ್ ಫೋನ್ ನಲ್ಲಿ ಸೋಶಿಯಲ್ ಮೀಡಿಯಾ ‘ರೀಲ್ಸ್’ ನೋಡುವುದರಲ್ಲಿ ಮಗ್ನರಾಗಿದ್ದಾಗ, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿಯೊಬ್ಬ ಜೈಲಿನ ಗೋಡೆ ಹತ್ತಿ ಪರಾರಿಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿಯ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ.
ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಜೈಲರ್ ನೀರಜ್ ಕುಮಾರ್ ಮತ್ತು ಡೆಪ್ಯುಟಿ ಜೈಲರ್ ವಂದನಾ ಚೌಧರಿ ಸೇರಿದಂತೆ ಒಟ್ಟು 11 ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಲ್ಲದೆ, ಹಿರಿಯ ಜೈಲು ಸೂಪರಿಂಟೆಂಡೆಂಟ್ ಅವಿನಾಶ್ ಗೌತಮ್ ವಿರುದ್ಧ ಕಠಿಣ ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಜೈಲು ಇಲಾಖೆಯ ಡಿಜಿ ಪಿ.ಸಿ. ಮೀನಾ ತಿಳಿಸಿದ್ದಾರೆ.
ಪರಾರಿಯಾದ ಖೈದಿಯನ್ನು ಅಮ್ರೋಹಾ ಮೂಲದ ದಿನೇಶ್ (22) ಎಂದು ಗುರುತಿಸಲಾಗಿದೆ. ಈತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದನು. ಸೋಮವಾರ ಮಧ್ಯಾಹ್ನ ಜೈಲಿನ ಆವರಣಕ್ಕೆ ಹೊಂದಿಕೊಂಡಿರುವ ಕೃಷಿ ಫಾರ್ಮ್ನಲ್ಲಿ ಇತರೆ 45 ಖೈದಿಗಳೊಂದಿಗೆ ಈತನನ್ನೂ ದಿನನಿತ್ಯದ ಕೆಲಸಕ್ಕೆ ನಿಯೋಜಿಸಲಾಗಿತ್ತು. ಈ ಗುಂಪಿನ ಮೇಲೆ ನಿಗಾ ಇಡಲು ಸುಮಾರು 10 ಕ್ಕೂ ಹೆಚ್ಚು ಜೈಲು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಮಧ್ಯಾಹ್ನ 12:30ರ ಸುಮಾರಿಗೆ ಕಾವಲುಗಾರರೆಲ್ಲರೂ ತಮ್ಮ ಮೊಬೈಲ್ ಫೋನ್ ಗಳಲ್ಲಿ ರೀಲ್ಸ್ ವೀಕ್ಷಿಸುತ್ತಾ ಸಂಪೂರ್ಣವಾಗಿ ಗಮನ ಕಳೆದುಕೊಂಡಿದ್ದರು. ಇದೇ ಭದ್ರತಾ ಲೋಪವನ್ನು ಬಳಸಿಕೊಂಡ ಖೈದಿ ದಿನೇಶ್, ಐದು ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಹತ್ತಿ ಅಲ್ಲಿಂದ ಯಾರಿಗೂ ತಿಳಿಯದಂತೆ ನಾಪತ್ತೆಯಾಗಿದ್ದಾನೆ.
ಬರೇಲಿಯ ಈ ಸೆಂಟ್ರಲ್ ಜೈಲನ್ನು ಉತ್ತರ ಪ್ರದೇಶದ ಅತ್ಯಂತ ಸೂಕ್ಷ್ಮ ಮತ್ತು ಹೈ–ಸೆಕ್ಯುರಿಟಿ ಜೈಲು ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕಟ್ಟುನಿಟ್ಟಿನ ಸಿಸಿಟಿವಿ ಕಣ್ಗಾವಲು ಮತ್ತು ಆವರಣದೊಳಗೆ ಪೊಲೀಸ್ ಚೌಕಿ ಇದ್ದಾಗ್ಯೂ, ಕಳೆದ ಒಂದು ವರ್ಷದ ಅವಧಿಯಲ್ಲಿ ಖೈದಿ ಪರಾರಿಯಾಗುತ್ತಿರುವ ಎರಡನೇ ಘಟನೆ ಇದಾಗಿದೆ. 2024ರ ಅಕ್ಟೋಬರ್ನಲ್ಲಿ ಹರ್ಪಾಲ್ ಎಂಬ ಕೊಲೆ ಆರೋಪಿಯೂ ಇದೇ ರೀತಿ ಪರಾರಿಯಾಗಿದ್ದನು (ನಂತರ ಆತನನ್ನು ಪೊಲೀಸ್ ಎನ್ ಕೌಂಟರ್ ಬಳಿಕ ಮರುಬಂಧಿಸಲಾಗಿತ್ತು).
ಸದ್ಯ ಪರಾರಿಯಾಗಿರುವ ಖೈದಿ ದಿನೇಶ್ ಪತ್ತೆಗಾಗಿ ಪೊಲೀಸರು ಮತ್ತು ಜೈಲು ಆಡಳಿತದ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಹುಡುಕಾಟ ತೀವ್ರಗೊಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























