ರಕ್ಷಿಸಲು ಬಂದ ಉರಗ ತಜ್ಞನನ್ನೇ ಬಲಿ ಪಡೆದ ಹಾವು!

sadashiva
24/06/2021

ಬಾಗಲಕೋಟೆ: ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ರಕ್ಷಿಸಲು ಮುಂದಾಗಿದ್ದ ಉರಗ ತಜ್ಞಗೆ ಹಾವು ಕಡಿದಿದ್ದು, ಪರಿಣಾಮವಾಗಿ ಅವರು ಸಾವನ್ನಪ್ಪಿರುವ ಘಟನೆ  ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಬಳಿಯ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ.

30 ವರ್ಷ ವಯಸ್ಸಿನ ಸದಾಶಿವ ನಿಂಗಪ್ಪ ಕರಣಿ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ರಾತ್ರಿ ಗ್ರಾಮದಲ್ಲಿ ಹಾವು ಕಾಣಿಸಿಕೊಂಡಿತ್ತು. ಈ ಸುದ್ದಿ ತಿಳಿದು ಸ್ಥಳಕ್ಕೆ ಹೋಗಿದ್ದ ಸದಾಶಿವ ಅವರು ಹಾವನ್ನು ಹಿಡಿದಿದ್ದರು. ಆದರೆ ಈ ವೇಳೆ ಅವರಿಗೆ ಹಾವು ಕಚ್ಚಿತ್ತು.

ಹಾವು ಕಚ್ಚಿದ ಬಳಿಕ ಅವರಿಗೆ ಗಿಡಮೂಲಿಕೆಗಳ ಔಷಧಿಯನ್ನು ನೀಡಲಾಗಿತ್ತು. ಆದರೆ, ಆ ಔಷಧಿ ಫಲಿಸದೇ ತಡ ರಾತ್ರಿ ಅವರು ವಿಷ ಏರಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸದಾಶಿವ ಅವರ ತಂದೆ ಕೂಡ ಹಾವು ಹಿಡಿಯುತ್ತಿದ್ದರು. ಸದಾಶಿವ ಅವರು ಕೂಡ ಹಾವು ಹಿಡಿದು ರಕ್ಷಿಸುವಲ್ಲಿ ಪ್ರಸಿದ್ಧಿ ಹೊಂದಿದ್ದರು. ಇದೀಗ ಅವರು ಹಾವಿಗೆ ಬಲಿಯಾಗಿದ್ದಾರೆ. ಘಟನೆ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version