ಅಯೋಧ್ಯೆ ದೇಣಿಗೆ ಹಗರಣ: “ನಾನು ಮೌನವ್ರತದಲ್ಲಿದ್ದೇನೆ” : ರಾಮಭಕ್ತರಿಗೆ ಚಂಪತ್ ರಾಯ್ ಬಹಿರಂಗ ಪತ್ರ

champat rai
08/07/2026

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇಣಿಗೆ ಹಣ ದುರುಪಯೋಗ ಮತ್ತು ಕಳ್ಳತನದ ಆರೋಪಗಳ ಹಿನ್ನೆಲೆಯಲ್ಲಿ ಟ್ರಸ್ಟ್‌ ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಕೊನೆಗೂ ಮೌನ ಮುರಿದಿದ್ದಾರೆ. ರಾಮಭಕ್ತರನ್ನುದ್ದೇಶಿಸಿ ಸಾಮಾಜಿಕ ಜಾಲತಾಣ ‘X’ ನಲ್ಲಿ ಬಹಿರಂಗ ಪತ್ರವೊಂದನ್ನು ಬರೆದಿರುವ ಅವರು, ತನಿಖೆ ಪೂರ್ಣಗೊಂಡ ನಂತರವೇ ಪ್ರತಿಯೊಂದು ಆರೋಪಕ್ಕೂ ಉತ್ತರಿಸುವುದಾಗಿ ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?

“ಜೂನ್ 10, 2025 ರಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದ ದೇಣಿಗೆ ಎಣಿಕೆಯ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಳ್ಳತನದ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ನನ್ನ ಮೇಲೂ ಹಲವು ವೈಯಕ್ತಿಕ ಆರೋಪಗಳನ್ನು ಮಾಡಲಾಗಿದೆ. ಸದ್ಯ ನಾನು ‘ಮೌನವ್ರತ’ ಆಚರಿಸುತ್ತಿದ್ದೇನೆ. ಜುಲೈ 6 ರಂದು ನಡೆದ ಟ್ರಸ್ಟ್ ಸಭೆಯಲ್ಲಿ ಮಂಡಿಸಲಾದ ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿಯು ಅತ್ಯಂತ ಗೌಪ್ಯವಾಗಿದ್ದರೂ, ಅದು ಈಗ ಸಾರ್ವಜನಿಕರ ಕೈ ಸೇರಿದೆ. ಎಸ್‌ಐಟಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ ನಂತರ ನಾನು ಪ್ರತಿಯೊಂದು ಅಂಶಕ್ಕೂ ಸ್ಪಷ್ಟವಾಗಿ ಉತ್ತರಿಸುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ. ಸತ್ಯಕ್ಕೆ ಕೊನೆಗೂ ಜಯ ಸಿಗಲಿದೆ. ಸಂಘಟನೆಯ ಆದೇಶದ ಮೇರೆಗೆ ನಾನು 1971 ರಿಂದ ಅಯೋಧ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಕಳೆದ 45 ವರ್ಷಗಳ ನನ್ನ ಜೀವನ ಮತ್ತು ಕೆಲಸ ಎಲ್ಲರಿಗೂ ತಿಳಿದಿರುವ ತೆರೆದ ಪುಸ್ತಕವಾಗಿದೆ,” ಎಂದು ಚಂಪತ್ ರಾಯ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಯೋಧ್ಯೆಯಲ್ಲಿ ನಡೆದ ಟ್ರಸ್ಟ್‌ನ ಪ್ರಮುಖ ಸಭೆಯಲ್ಲಿ ಚಂಪತ್ ರಾಯ್ ಮತ್ತು ಮತ್ತೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಮರುದಿನವೇ ಚಂಪತ್ ರಾಯ್ ಅವರ ಈ ಹೇಳಿಕೆ ಹೊರಬಿದ್ದಿದೆ. ಇದರೊಂದಿಗೆ ಗೋಪಾಲ್ ರಾವ್ (ಗೋಪಾಲ್ ನಾಗರಕಟ್ಟೆ) ಅವರನ್ನು ಇನ್ಮುಂದೆ ಟ್ರಸ್ಟ್ ಸಭೆಗಳಿಗೆ ಆಹ್ವಾನಿಸದಿರಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರ ಉತ್ತರಾಧಿಕಾರಿ ಮಹಂತ್ ಕಮಲ್ ನಯನ್ ದಾಸ್ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರಕ್ಕೆ ಎಸ್‌ಐಟಿ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ದೇಣಿಗೆ ಎಣಿಕೆ ವೇಳೆ ಕಳ್ಳತನ ನಡೆದಿರುವುದಕ್ಕೆ ಪ್ರಬಲ ಸಾಕ್ಷ್ಯಗಳು ಸಿಕ್ಕಿವೆ. ಏಪ್ರಿಲ್ 27 ರಿಂದ ಜೂನ್ 5 ರ ನಡುವಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಹಣ ಎಣಿಕೆ ಮಾಡುವ ಸಿಬ್ಬಂದಿ ನೋಟುಗಳ ಕಟ್ಟುಗಳನ್ನು ಮತ್ತು ನಗದನ್ನು ತಮ್ಮ ಬಟ್ಟೆ, ಜೇಬು ಮತ್ತು ಶೂಗಳಲ್ಲಿ ಬಚ್ಚಿಡುತ್ತಿರುವುದು ಪತ್ತೆಯಾಗಿದೆ. ಇಂತಹ ಸುಮಾರು 70 ಕಳ್ಳತನದ ಘಟನೆಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಲವಕುಶ್ ಮಿಶ್ರಾ, ಅನುಕಲ್ಪ್ ಮಿಶ್ರಾ ಮತ್ತು ಕರುಣೇಶ್ ಪಾಂಡೆ ಸೇರಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಸಿಬ್ಬಂದಿಗೆ ಕಳ್ಳತನ ಮಾಡಲು ಇತರ ಕೆಲ ನೌಕರರು ಸಹಾಯ ಮಾಡಿರುವುದು ಕೂಡ ಸಿಸಿಟಿವಿ ಮೂಲಕ ಬಹಿರಂಗಗೊಂಡಿದೆ. ಮುಂಬರುವ ದಿನಗಳಲ್ಲಿ ಅಂತಿಮ ವರದಿ ಬಂದ ಬಳಿಕ ಮತ್ತಷ್ಟು ಸತ್ಯಾಸತ್ಯತೆಗಳು ಹೊರಬರಲಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version