ವಯನಾಡ್ ಭೂಕುಸಿತ ಕೇಸ್: ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದ ಹಿಂದಿನ ಕೇರಳ ಸರ್ಕಾರ!

wayanad.jpg
08/07/2026

ತಿರುವನಂತಪುರಂ: ನಿನ್ನೆ ಕೇರಳದಲ್ಲಿ ನಡೆದ ತೀವ್ರ ಭೂಕುಸಿತದ ಬೆನ್ನಲ್ಲೇ ಆತಂಕಾರಿ ವಿಚಾರ ಬೆಳಕಿಗೆ ಬಂದಿದೆ. ಕಳ್ಳಾಡಿ–ಆನಕ್ಕಾಂಪೊಯಿಲ್ ಸುರಂಗ ಮಾರ್ಗ ಯೋಜನೆಗೆ (Kalladi-Anakkampoyil Tunnel Project) ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಳ್ಳಲು ಹಿಂದಿನ ಕೇರಳ ಸರ್ಕಾರವು ತಪ್ಪು ಮಾಹಿತಿಗಳನ್ನೊಳಗೊಂಡ ವರದಿಯನ್ನು ಸಲ್ಲಿಸಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಕುಸಿತದ ಭೀತಿ ಇರುವ ಮತ್ತು ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುವ ಈ ಪ್ರದೇಶವನ್ನು ಸುರಕ್ಷಿತ ಎಂದು ಬಿಂಬಿಸಿ ಕೇಂದ್ರಕ್ಕೆ ವರದಿ ನೀಡಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ವರದಿಯಲ್ಲೇನಿದೆ?

ಮೇ 2022 ರಲ್ಲಿ ಕೇರಳದ ಸಾರ್ವಜನಿಕ ಲೋಕೋಪಯೋಗಿ ಇಲಾಖೆ (PWD) ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ವರದಿಯೊಂದನ್ನು ಸಲ್ಲಿಸಿತ್ತು. ಆ ವರದಿಯಲ್ಲಿ, ಈ ಯೋಜನಾ ಪ್ರದೇಶವು ಯಾವುದೇ ಪರಿಸರ ಸೂಕ್ಷ್ಮ ವಲಯಕ್ಕೆ (ESA) ಒಳಪಡುವುದಿಲ್ಲ ಮತ್ತು ಇದು ಸಂರಕ್ಷಿತ ಪ್ರದೇಶವಲ್ಲ ಎಂದು ಉಲ್ಲೇಖಿಸಲಾಗಿತ್ತು. ಅಷ್ಟೇ ಅಲ್ಲದೆ, ಈ ಭಾಗದಲ್ಲಿ ಯಾವುದೇ ಅರಣ್ಯ ಹಕ್ಕು ಕಾಯ್ದೆ ಅನ್ವಯಿಸುವುದಿಲ್ಲ ಹಾಗೂ ಆದಿವಾಸಿಗಳ ಭೂಮಿ ಇಲ್ಲ ಎಂದೂ ಲೋಕೋಪಯೋಗಿ ಇಲಾಖೆಯ ಕೋಝಿಕ್ಕೋಡ್ ಎಕ್ಸಿಕ್ಯೂಟಿವ್ ಇಂಜಿನಿಯರ್ ವರದಿಯಲ್ಲಿ ತಿಳಿಸಿದ್ದರು.

ಮುಚ್ಚಿಟ್ಟ ಸತ್ಯಗಳು ಏನು?

ಪರಿಸರ ಸಂಘಟನೆಗಳ ಪ್ರಕಾರ, ಸರ್ಕಾರವು ಈ ಕೆಳಗಿನ ಪ್ರಮುಖ ಸೂಕ್ಷ್ಮ ವಿಚಾರಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದೆ:

ಪರಿಸರ ಸೂಕ್ಷ್ಮ ವಲಯ: ಸುರಂಗ ಮಾರ್ಗ ಹಾದುಹೋಗುವ ವಯನಾಡಿನ ವೆಲ್ಲರಿಮಲ ಮತ್ತು ಕೋಝಿಕ್ಕೋಡ್ನ ತಿರುವಂಬಾಡಿ ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ (ESA) ವ್ಯಾಪ್ತಿಗೆ ಬರುತ್ತವೆ.

ಆದಿವಾಸಿಗಳ ನೆಲೆ: ಉದ್ದೇಶಿತ ಸುರಂಗದ ಮುಖಭಾಗಕ್ಕೆ ಹೊಂದಿಕೊಂಡಂತೆ ಅರಣಮಲದ 27 ಕಾಟ್ಟುನಾಯ್ಕ ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. ಈ ಯೋಜನಾ ಪ್ರದೇಶದ ಸುತ್ತಮುತ್ತ ಒಟ್ಟು 32 ಆದಿವಾಸಿ ಗ್ರಾಮಗಳಿವೆ.

ಭೂಕುಸಿತದ ಇತಿಹಾಸ: ರಾಜ್ಯ ಪರಿಸರ ಪ್ರಭಾವ ತಜ್ಞರ ಸಮಿತಿಯು ಈ ಪ್ರದೇಶವನ್ನು ನಿರಂತರ ಭೂಕುಸಿತದ ಅಪಾಯವಿರುವ ವಲಯ ಎಂದು ಗುರುತಿಸಿದೆ. 1960 ರಿಂದಲೂ ಇಲ್ಲಿ ಸರಣಿ ಭೂಕುಸಿತಗಳು ಸಂಭವಿಸುತ್ತಿವೆ.

ದುರಂತದ ಸ್ಥಳಕ್ಕೆ ಹತ್ತಿರ: ಇತ್ತೀಚೆಗೆ ಭೀಕರ ಭೂಕುಸಿತಕ್ಕೆ ತುತ್ತಾದ ಮುಂಡಕೈ–ಚೂರಲ್’ಮಲ ಪ್ರದೇಶವು ಕಳ್ಳಾಡಿಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. ಅಷ್ಟೇ ಅಲ್ಲದೆ, ಕಳ್ಳಾಡಿ ಸುರಂಗದ ಮುಖಭಾಗದಿಂದ ಪುತ್ತುಮಲ ದುರಂತ ಭೂಮಿಗೆ ಕೇವಲ 800 ಮೀಟರ್ ಮಾತ್ರ ಅಂತರವಿದೆ.

ಕೇಂದ್ರ ಸರ್ಕಾರವನ್ನು ದಾರಿ ತಪ್ಪಿಸಿ, ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಇಂತಹ ಬೃಹತ್ ಯೋಜನೆಗೆ ಅನುಮತಿ ಪಡೆದಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version