ನಮಗೆ ಭಾರತದಂತಹ ಬೇರೆ ಸ್ನೇಹಿತರೂ ಇದ್ದಾರೆ: ಅಮೆರಿಕಕ್ಕೆ ಇಸ್ರೇಲ್ ಪ್ರಧಾನಿ ನೆತನ್ಯಾಹು ತಿರುಗೇಟು
ಜೆರುಸಲೆಮ್: ಇಸ್ರೇಲ್ ದೇಶಕ್ಕೆ ಅಮೆರಿಕ ಮಾತ್ರವೇ ಏಕೈಕ ಪ್ರಬಲ ಮಿತ್ರರಾಷ್ಟ್ರ ಎಂಬ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಳ್ಳಿಹಾಕಿದ್ದಾರೆ. ಇಸ್ರೇಲ್ ಗೆ ಜಾಗತಿಕ ಮಟ್ಟದಲ್ಲಿ ಪ್ರಬಲ ಬೆಂಬಲ ನೀಡುತ್ತಿರುವ ದೇಶಗಳಲ್ಲಿ ‘ಭಾರತ’ವೂ ಪ್ರಮುಖವಾದದ್ದು ಎಂದು ಅವರು ನೆನಪಿಸಿದ್ದಾರೆ.
ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, “ನನಗೆ ಜೆಡಿ ವ್ಯಾನ್ಸ್ ಅವರ ಮೇಲೆ ಗೌರವವಿದೆ ಮತ್ತು ಅವರೊಂದಿಗೆ ನಮ್ಮ ಬಾಂಧವ್ಯ ಚೆನ್ನಾಗಿದೆ. ಆದರೆ ಅವರು ಹೇಳುವ ಪ್ರತಿಯೊಂದನ್ನೂ ನಾನು ಒಪ್ಪುತ್ತೇನೆ ಎಂದಲ್ಲ. ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ನಮಗೆ ಸಿಕ್ಕ ಅತ್ಯಂತ ಆಪ್ತ ಹಾಗೂ ಶ್ರೇಷ್ಠ ಸ್ನೇಹಿತ ಎಂಬುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಆದರೆ, ನಮಗೆ ಭಾರತದಂತಹ ಇತರ ಸ್ನೇಹಿತರೂ ಇದ್ದಾರೆ ಎಂಬುದನ್ನು ಮರೆಯುವಂತಿಲ್ಲ” ಎಂದಿದ್ದಾರೆ.
ಭಾರತದ ಬಗ್ಗೆ ವಿಶೇಷವಾಗಿ ಮಾತನಾಡಿದ ಅವರು, “ಭಾರತವು 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು, ಅಲ್ಲಿ ನಮಗೆ ಅಪಾರವಾದ ಬೆಂಬಲವಿದೆ. ನನ್ನ ಫೇಸ್‌ಬುಕ್ ಪುಟವನ್ನು ನೋಡಿದರೆ ಸಾಕು, ಅಲ್ಲಿ ಭಾರತೀಯರು ನಮಗೆ ನೀಡುತ್ತಿರುವ ಪ್ರಚಂಡ ಬೆಂಬಲದ ಸಂದೇಶಗಳು ತುಂಬಿಹೋಗಿವೆ” ಎಂದು ಶ್ಲಾಘಿಸಿದ್ದಾರೆ.
ಜೂನ್ ತಿಂಗಳಲ್ಲಿ ಜೆಡಿ ವ್ಯಾನ್ಸ್ ಅವರು ಡೊನಾಲ್ಡ್ ಟ್ರಂಪ್ ಅವರ ಇರಾನ್ ನೀತಿಯನ್ನು ಸಮರ್ಥಿಸಿಕೊಳ್ಳುವಾಗ, “ಇಸ್ರೇಲ್ ದೇಶದ ಪರವಾಗಿ ನಿಲ್ಲುವ ವಿಶ್ವದ ಏಕೈಕ ನಾಯಕ ಡೊನಾಲ್ಡ್ ಟ್ರಂಪ್. ಜಗತ್ತಿನಲ್ಲಿ ಇಸ್ರೇಲ್‌ಗೆ ಉಳಿದಿರುವ ಏಕೈಕ ಶಕ್ತಿಶಾಲಿ ಮಿತ್ರರಾಷ್ಟ್ರವನ್ನು (ಅಮೆರಿಕ) ಇಸ್ರೇಲ್ ಸಚಿವರುಗಳು ಬಹಿರಂಗವಾಗಿ ಟೀಕಿಸಬಾರದು” ಎಂದು ಹೇಳಿದ್ದರು. ಈ ಹೇಳಿಕೆಗೆ ಈಗ ನೆತನ್ಯಾಹು ನೇರವಾಗಿ ತಿರುಗೇಟು ನೀಡಿದ್ದಾರೆ.
ರಾಜಕೀಯ ಒತ್ತಡಗಳ ನಡುವೆಯೂ ಹಲವು ದೇಶಗಳ ಸರ್ಕಾರಗಳು ಇಸ್ರೇಲ್ ಬೆನ್ನಿಗೆ ನಿಂತಿವೆ ಎಂದು ನೆತನ್ಯಾಹು ಹೇಳಿದ್ದು, ಮುಂಬರುವ ವಾರಗಳಲ್ಲಿ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























