ಅಪ್ರಾಪ್ತ ಬಾಲಕಿ ಮೇಲೆ ಪಿಎಸ್ ಐನಿಂದಲೇ ಲೈಂಗಿಕ ದೌರ್ಜನ್ಯ: ಆರೋಪಿಯ ಬಂಧನ
ಕಾರವಾರ: ಕಾನೂನು ರಕ್ಷಕನೇ ಭಕ್ಷಕನಾದ ಆಘಾತಕಾರಿ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಯಲ್ಲಾಪುರ ಮೂಲದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಂಕಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (PSI) ಅಭಿನಂದನ್ ಗೌಡ ಅವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ಮೂಲದಅಭಿನಂದನ್ ಗೌಡ, ಕೆಲವು ತಿಂಗಳ ಹಿಂದಷ್ಟೇ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಗೆ ಕಾನೂನು ಮತ್ತು ಸುವ್ಯವಸ್ಥೆ (LNO) ಅಧಿಕಾರಿಯಾಗಿ ವರ್ಗಾವಣೆಗೊಂಡು ಬಂದಿದ್ದರು. ಆರೋಪದ ಪ್ರಕಾರ, ಯಲ್ಲಾಪುರ ಮೂಲದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಭಟ್ಕಳಕ್ಕೆ ಕರೆತಂದಿದ್ದ ಪಿಎಸ್ ಐ ಅಭಿನಂದನ್, ಅಲ್ಲಿನ ಲಾಡ್ಜ್ ಒಂದರಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಅಪ್ರಾಪ್ತ ಬಾಲಕಿಯು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ಬಾಲಕಿಯ ದೂರಿಗೆ ತಕ್ಷಣವೇ ಸ್ಪಂದಿಸಿದ ಭಟ್ಕಳ ನಗರ ಠಾಣೆಯ ಪೊಲೀಸರು ಆರೋಪಿ ಪಿಎಸ್ ಐ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತದನಂತರ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ಬಂಧನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ಸಾರ್ವಜನಿಕರ ಜೀವ, ಆಸ್ತಿ ಮತ್ತು ಗೌರವದ ರಕ್ಷಣೆಯ ಹೊಣೆ ಹೊತ್ತಿರುವ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧವೇ ಇಂತಹ ಗಂಭೀರ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣ ಕೇಳಿಬಂದಿರುವುದು ಜನಸಾಮಾನ್ಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ. ಪ್ರಸ್ತುತ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























