ಬಾಲಕನ ಕಣ್ಣಿಗೆ ಖಾರದ ಪುಡಿ ಹಾಕಿ ಮೃಗೀಯ ಹಲ್ಲೆ: ರಾಮಕೃಷ್ಣ ಆಶ್ರಮದ ಗುರೂಜಿ ವೇಣುಗೋಪಾಲ್ ಅರೆಸ್ಟ್

ರಾಯಚೂರು: ಪೆನ್ನು ಕದ್ದ ಆರೋಪ ಹೊರಿಸಿ 3ನೇ ತರಗತಿಯ ಬಾಲಕನೊಬ್ಬನಿಗೆ ಸತತ ಮೂರು ದಿನಗಳ ಕಾಲ ಚಿತ್ರ ಹಿಂಸೆ ನೀಡಿದ್ದ ರಾಯಚೂರು ನಗರದಲ್ಲಿರುವ ರಾಮಕೃಷ್ಣ-ವಿವೇಕಾನಂದ ಆಶ್ರಮ ಸಂಚಾಲಕ, ಗುರೂಜಿ ವೇಣುಗೋಪಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 31ರಂದು ಬಾಲಕನ ತಾಯಿ ಬಾಲಕನನ್ನು ನೋಡಲು ಆಶ್ರಮಕ್ಕೆ ಹೋಗಿದ್ದರು. ಈ ವೇಳೆ ಬಾಲಕ ಕಂಗಾಲಾಗಿದ್ದು, ಬೆದರಿ ಹೋಗಿದ್ದ. ಈ ಬಗ್ಗೆ ಬಾಲಕನ ತಾಯಿ ವಿಚಾರಿಸಿದಾಗ ಗುರೂಜಿ ವೇಣುಗೋಪಾಲ್ ನ ವಿಕೃತಿ ಬಯಲಾಗಿದೆ.
ಏನೂ ಅರಿಯದ ಬಾಲಕನಿಗೆ ಚಿತ್ರಹಿಂಸೆ:
3ನೇ ತರಗತಿಯ ಬಾಲಕ ಪೆನ್ ಕದ್ದಿದ್ದಾನೆ ಅಂತ ಗುರೂಜಿ ವೇಣುಗೋಪಾಲ್ ಗೆ ಇನ್ನೊಬ್ಬ ಬಾಲಕ ದೂರು ಹೇಳಿದ್ದಾನೆ. ಈ ವೇಳೆ ಬಾಲಕನನ್ನು ಕರೆದು ಬುದ್ಧಿ ಹೇಳಬೇಕಿದ್ದ ವೇಣುಗೋಪಾಲ್ ಶಿಸ್ತು ಕಲಿಸುವ ನೆಪದಲ್ಲಿ ಮೃಗೀಯವಾಗಿ ವರ್ತಿಸಿದ್ದ. ಬಾಲಕನ ಕಣ್ಣಿಗೆ ಖಾರದ ಪುಡಿ ಹಾಕಿ, ಬಾಲಕನ ಎಡಗೈ, ಮುಂಗೈಗೆ ಬಲವಾಗಿ ಕಚ್ಚಿ ವಿಕೃತಿ ಮೆರೆದಿದ್ದ. ಮುಖಕ್ಕೆ ಉಗುರಿನಿಂದ ಪರಚಿ, ಕಟ್ಟಿಗೆ—ಬ್ಯಾಟ್ ನಿಂದ ಹಲ್ಲೆ ನಡೆಸಿದ್ದ. ಹಲ್ಲೆ ನಡೆಸುತ್ತಿದ್ದ ವೇಳೆ ಕಣ್ಣೀರು ಹಾಕಿದ್ರೆ ಹೆಚ್ಚು ಹೊಡೆಯುವುದಾಗಿ ಬೆದರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಬೆಳಕಿಗೆ ಬಂದ ಬಳಿಕ ಆಶ್ರಮದಲ್ಲಿ ಸುಮಾರು ಎಂಟ್ಹತ್ತು ವಿದ್ಯಾರ್ಥಿಗಳನ್ನ ಮಕ್ಕಳ ರಕ್ಷಣಾ ಇಲಾಖೆ ಸಿಬ್ಬಂದಿ ರಕ್ಷಿಸಿ ಬಾಲಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97