ಪ್ರಸಾದ ತೆಗೆದುಕೊಳ್ಳುವವರೆಗೆ ರೇವಣ್ಣ ಕಾಲಿಗೆ ಚಪ್ಪಲಿ ಧರಿಸಲ್ಲ: ಎಚ್.ಡಿ. ಕುಮಾರಸ್ವಾಮಿ

kumaraswamy
24/04/2026

ಹೊಳೆನರಸೀಪುರ: ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ದೈವಭಕ್ತಿ ಮತ್ತು ಜನಪರ ಕೆಲಸಗಳ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಮ್ಮ ಅಣ್ಣ ರೇವಣ್ಣ ಅವರ ಶ್ರದ್ಧೆಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, “ರೇವಣ್ಣ ಅವರಿಗೆ ದೇವರ ಮೇಲೆ ಅತೀವ ನಂಬಿಕೆ. ದೇವಸ್ಥಾನಕ್ಕೆ ಹೋದರೆ ದೇವರ ಪ್ರಸಾದ ತೆಗೆದುಕೊಳ್ಳುವವರೆಗೆ ಅವರು ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಅಷ್ಟೇ ಅಲ್ಲ, ಅದೆಷ್ಟೋ ಬಾರಿ ಚಪ್ಪಲಿ ಧರಿಸದೆಯೇ ಬರಿಗಾಲಿನಲ್ಲಿ ವಿಧಾನಸೌಧಕ್ಕೂ ಹೋಗಿದ್ದಾರೆ,” ಎಂದು ಅವರ ದೈವಭಕ್ತಿಯನ್ನು ಸ್ಮರಿಸಿದರು.

ರೇವಣ್ಣ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾ, “ರೇವಣ್ಣ ಅವರು ಇಡೀ ಹಾಸನ ಜಿಲ್ಲೆಯಲ್ಲಿ ಅದೆಷ್ಟು ದೇವಸ್ಥಾನಗಳನ್ನು ಕಟ್ಟಿಸಿದ್ದಾರೋ ತಿಳಿಯದು. ಅವರಿಗೆ ಜನರ ಬಗ್ಗೆ ಕಾಳಜಿಯಿದೆ, ಆದರೆ ದೇವರಿಗೆ ಅವರಿಗೆ ಸ್ವಲ್ಪ ಕೋಪವನ್ನೂ ಕೊಟ್ಟುಬಿಟ್ಟಿದ್ದಾನೆ. ಜನರ ಮುಂದೆ ಸ್ವಲ್ಪ ಶಾಂತವಾಗಿ ವರ್ತಿಸಿದ್ದರೆ ಅವರು ಇನ್ನೂ ಎತ್ತರಕ್ಕೆ ಬೆಳೆಯುತ್ತಿದ್ದರು. ತಮ್ಮ ಕೋಪವನ್ನು ಸ್ವಲ್ಪ ಬದಲಾಯಿಸಿಕೊಳ್ಳುವಂತೆ ನಾನೇ ಎಷ್ಟೋ ಬಾರಿ ಹೇಳಿದ್ದೇನೆ, ಆದರೆ ಅವರು ಕೇಳುತ್ತಿಲ್ಲ,” ಎಂದು ಹಾಸ್ಯದ ಚಟಾಕಿ ಹಾರಿಸಿದರು.

“ರೇವಣ್ಣ ಅವರು ಹೊರಗೆ ಜನರ ಮೇಲೆ ಕೂಗಾಡಬಹುದು, ಆದರೆ ಅವರ ಹೃದಯ ಬಹಳ ಶುದ್ಧವಾಗಿದೆ. ರಾಜ್ಯ ಮತ್ತು ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ದೇವೇಗೌಡರು ಕಂಡಿರುವ ಕನಸನ್ನು ನನಸು ಮಾಡಲು ಅವರು ಶ್ರಮಿಸುತ್ತಿದ್ದಾರೆ. ಈ ಜಿಲ್ಲೆಯ ಜನರ ಮೇಲೆ ನಮಗೆ ಅಪಾರ ವಿಶ್ವಾಸವಿದೆ,” ಎಂದು ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಹಾಸನ ಜಿಲ್ಲೆಯ ಅಭಿವೃದ್ಧಿ ಮತ್ತು ದೈವಿಕ ಕಾರ್ಯಗಳಲ್ಲಿ ರೇವಣ್ಣ ಅವರ ಕೊಡುಗೆಯನ್ನು ಸ್ಮರಿಸುತ್ತಾ, ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಕುಮಾರಸ್ವಾಮಿ ಅವರು ಈ ವೇದಿಕೆಯಲ್ಲಿ ಹಂಚಿಕೊಂಡರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version