2:12 PM Thursday 23 - October 2025

ಇಡಿ ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿಯ 30 ಲಕ್ಷ ರೂ. ದೋಚಿದ ದರೋಡೆಕೋರರು!

bantwala
04/01/2025

ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ ಕಳ್ಳರು ಖ್ಯಾತ ಬೀಡಿ ಸಂಸ್ಥೆಯ ಮಾಲಿಕರ ಮನೆಯಿಂದ ಬರೋಬ್ಬರಿ 30 ಲಕ್ಷ ರೂಪಾಯಿ ದೋಚಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಬೀಡಿ ಉದ್ಯಮಿ ಸಿಂಗಾರಿ ಹಾಜಿ ಸುಲೈಮಾನ್ ಎಂಬವರ ಮನೆಗೆ ಇಡಿ ಅಧಿಕಾರಿಗಳ ವೇಷದಲ್ಲಿ ಸುಮಾರು 8:30ರ ಸುಮಾರಿಗೆ ತಮಿಳುನಾಡು ನೋಂದಣಿಯ ಬಿಳಿ ಬಣ್ಣದ ಎಟ್ರಿಗಾ ಕಾರಿನಲ್ಲಿ ಬಂದಿದ್ದ 7 ದರೋಡೆಕೋರರು ವ್ಯವಸ್ಥಿತವಾಗಿ ಹಣ ದೋಚಿ ಪರಾರಿಯಾಗಿದ್ದಾರೆ.

ದರೋಡೆಕೋರರು ಹಿಂದಿ, ಇಂಗ್ಲಿಷ್, ತಮಿಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದ ದರೋಡೆಕೋರರು, ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಈ ವೇಳೆ ಸುಲೈಮಾನ್ ಹಾಜಿ ಬಾಗಿಲು ತೆರೆದ ವೇಳೆ, ನಕಲಿ ಐಡಿ ತೋರಿಸಿ, ನಾವು ಇಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಇದನ್ನು ನಂಬಿ ಮನೆಯ ಒಳಗೆ ಕರೆದು ಮಾತನಾಡಿದ್ದಾರೆ.

ಈ ವೇಳೆ ‘ನನ್ನ ಲೆಕ್ಕ ಪರಿಶೋಧಕರು ಇದ್ದಾರೆ, ನಾಳೆ ಮಾತನಾಡೋಣ’ ಎಂದು ಸುಲೈಮಾನ್ ಹೇಳಿದ್ದಾರೆ. ಆದರೆ ಅದೆಲ್ಲ ಬೇಡ, ಹಣ ಮತ್ತು ಚಿನ್ನಾಭರಣ ಎಷ್ಟಿದೆ ಎಂದು ತೋರಿಸಿ ಎನ್ನುತ್ತಾ, ಮನೆಯವರ ಮೊಬೈಲ್ ಪಡೆದುಕೊಂಡು ತಪಾಸಣೆ ಶುರು ಮಾಡಿದ್ದಾರೆ. ಮನೆಯ ಮುಂದಿನ, ಹಿಂದಿನ ಬಾಗಿಲು ಮುಚ್ಚಿ, ಮನೆಯವರನ್ನು ಒಂದೆಡೆ ಕೂರಿಸಿ ವಿಚಾರಣೆ ನಡೆಸುವ ನಾಟಕವಾಡಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ತಪಾಸಣೆ ನಡೆಸುವ ನಾಟಕವಾಡಿದ ದರೋಡೆಕೋರರು ಬಳಿಕ ಹಣವನ್ನು ಗೋಣಿಚೀಲಕ್ಕೆ ತುಂಬಿಸಿ, 3 ಮೊಬೈಲ್ ಪಡೆದು ಎರ್ಟಿಗಾ ಕಾರಿನಲ್ಲಿ ತೆರಳಿದ್ದಾರೆ. ಆದರೆ ಚಿನ್ನಾಭರಣಗಳನ್ನು ಅಲ್ಲೇ ಬಿಟ್ಟಿದ್ದಾರೆ.

ವಂಚಕರು ಮನೆಯಿಂದ ಹೊರಡುವ ವೇಳೆ ನಮ್ಮ ಜೊತೆ ಹಿಂದಿನಿಂದ ಬನ್ನಿ ತನಿಖೆ ಪೂರ್ಣಗೊಂಡ ಬಳಿಕ ಮೊಬೈಲ್ ಹಿಂದಿರುಗಿಸುತ್ತೇವೆ ಎಂದಿದ್ದಾರೆ. ನಾರ್ಶದಿಂದ ಬೋಳಂತೂರು ರಸ್ತೆ ಮೂಲಕ ಕಲ್ಲಡ್ಕ ಕಡೆ ಕಾರು ಚಲಿಸಿದೆ. ಬಳಿಕ ಹಿಂಬಾಲಿಸಲು ಸಾಧ್ಯವಾಗದಷ್ಟು ವೇಗದಲ್ಲಿ ಕಾರು ಚಲಿಸಿದ್ದು, ಈ ವೇಳೆ ಉದ್ಯಮಿ ಪುತ್ರ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ. ಈ ವೇಳೆ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ ಎನ್ನಲಾಗಿದೆ.

ಸದ್ಯ 30 ಲಕ್ಷ ರೂಪಾಯಿ ದೋಚಿ ವಂಚಕರು ತಲೆಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ತಾಂತ್ರಿಕ ತಂಡಗಳು ಆಗಮಿಸಿ ಮಾಹಿತಿ ಕಲೆ ಹಾಕಿವೆ. ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಯತೀಶ್, ಬಂಟ್ವಾಳ ಡಿವೈಎಸ್ ಪಿ ಮಾರ್ಗದರ್ಶನದಲ್ಲಿ ಪೊಲೀಸರು ವಂಚಕರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ

Exit mobile version