ಸುಚಿತ್ರಾಳ ಮೊಬೈಲ್ ನಲ್ಲಿತ್ತು ಹಲವು ರಹಸ್ಯ!: ಗುರೂಜಿ ಮಾತ್ರವಲ್ಲ, ಹಲವರಿಗೆ ‘ಮೋಹದ ಜಾಲ’!?

kamalakar bhat
06/02/2026

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿ ಸುಚಿತ್ರಾಳ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಕೇವಲ ಜ್ಯೋತಿಷಿ ಕಮಲಾಕರ್ ಭಟ್ ಗುರೂಜಿ ಮಾತ್ರವಲ್ಲದೆ, ಈಕೆ ರಾಜ್ಯದ ವಿವಿಧ ಜಿಲ್ಲೆಗಳ ಹಲವು ಯುವಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸುಚಿತ್ರಾಳ ಮೊಬೈಲ್ ನಲ್ಲಿ ಸಿಕ್ಕಿದ್ದೇನು?

ಪೊಲೀಸರು ಸುಚಿತ್ರಾಳ ಮೊಬೈಲ್ ಪರಿಶೀಲಿಸಿದಾಗ ಕಲಬುರಗಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಭಾಗದ ಹಲವು ಯುವಕರ ಜೊತೆ ಈಕೆ ನಿರಂತರವಾಗಿ ಚಾಟ್ ಮಾಡುತ್ತಿದ್ದ ವಿಷಯ ಪತ್ತೆಯಾಗಿದೆ. ಸುಚಿತ್ರಾಳ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಸಾಮಾಜಿಕ ಜಾಲತಾಣದ ಗೀಳು ಅವಳನ್ನು ಅನೇಕ ಯುವಕರ ಪರಿಚಯಕ್ಕೆ ದೂಡಿತ್ತು. ಪೊಲೀಸರ ಈ ತನಿಖೆಯಿಂದಾಗಿ ಆಕೆಯ ಜೊತೆ ಸಂಪರ್ಕದಲ್ಲಿದ್ದ ಯುವಕರು ಈಗ ಬೆಚ್ಚಿಬಿದ್ದಿದ್ದು, ಕೆಲವರು ತಮ್ಮ ಇನ್‌ ಸ್ಟಾ ಅಕೌಂಟ್ ಡಿಲೀಟ್ ಮಾಡಿದರೆ, ಇನ್ನು ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ಪತಿಯಿಂದ ಸ್ಫೋಟಕ ಆರೋಪ:

ಸುಚಿತ್ರಾ ಪತಿ ಮಹೇಶ್ ನಾಯಕ್ ಈ ಬಗ್ಗೆ ಮಾತನಾಡಿ, “ನಮ್ಮದು ಪ್ರೇಮ ವಿವಾಹವಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು, ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ರೀಲ್ಸ್ ಹುಚ್ಚು ಹತ್ತಿಸಿಕೊಂಡ ಮೇಲೆ ಅವಳು ದಾರಿ ತಪ್ಪಿದಳು. ಊರಿನ ಇಬ್ಬರು ಯುವಕರ ಜೊತೆಗೂ ಅವಳಿಗೆ ಸಂಬಂಧವಿತ್ತು, ಈ ಬಗ್ಗೆ ನನ್ನ ಮಗಳೇ ನನಗೆ ಮಾಹಿತಿ ನೀಡಿದ್ದಳು,” ಎಂದು ನೋವು ತೋಡಿಕೊಂಡಿದ್ದಾರೆ.

ದೂರು ನೀಡಲು ಎಸ್‌ಪಿ ಕರೆ:

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಎಸ್‌ಪಿ ಎಂ.ಎನ್. ದೀಪನ್, “ಸುಚಿತ್ರಾ ಸಾಮಾಜಿಕ ಜಾಲತಾಣದ ಮೂಲಕ ಬೇರೆ ಬೇರೆ ಯುವಕರ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಗಿದೆ. ಈಕೆ ಯಾರಿಗಾದರೂ ಹಣದ ಆಮಿಷವೊಡ್ಡಿ ಅಥವಾ ಬೇರೆ ರೀತಿಯಲ್ಲಿ ಮೋಸ ಮಾಡಿದ್ದರೆ ಅಂತಹವರು ನಿರ್ಭಯವಾಗಿ ದೂರು ನೀಡಬಹುದು. ದೂರು ನೀಡಿದವರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು,” ಎಂದು ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ವರ್ಗಾವಣೆ:

ಇದೇ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಸಿದ್ದಾಪುರ ಠಾಣೆಯ ಎಎಸ್‌ ಐ ಗಣಪತಿ ಭಟ್ ಮತ್ತು ಹೆಡ್ ಕಾನ್ಸ್‌ ಟೇಬಲ್ ಚಂದ್ರಶೇಖರ್ ಅವರನ್ನು ಹಳಿಯಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಎಸ್‌ ಪಿ ಆದೇಶ ಹೊರಡಿಸಿದ್ದಾರೆ.

ಒಟ್ಟಾರೆಯಾಗಿ, ಜ್ಯೋತಿಷಿ ಕಮಲಾಕರ್ ಭಟ್ ಜೊತೆಗಿನ ಅಕ್ರಮ ಸಂಬಂಧ ಮತ್ತು ವಸಂತ್ ನಾಯ್ಕ್ ಕೊಲೆ ಪ್ರಕರಣದ ಸುತ್ತ ಸುತ್ತುವರಿದಿರುವ ಈಕೆಯ “ಮೋಹದ ಜಾಲ” ಈಗ ಪೊಲೀಸರ ತನಿಖೆಯಿಂದ ಬಯಲಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version