ಸಿದ್ದರಾಮಯ್ಯ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ, ಸರ್ಕಾರದ ಮೇಲೆ ಹಿಡಿತ ಇಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಸಿದ್ದರಾಮಯ್ಯಗೆ ಸರ್ಕಾರದ ಮೇಲೆ ಹಿಡಿತ ಇಲ್ಲ. ಸಿದ್ದರಾಮಯ್ಯ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆರು ತಿಂಗಳಾದರೂ ಮುಂದೆ ಹೋಗುತ್ತಿಲ್ಲ . ಸರ್ಕಾರದ ಚಕ್ರಗಳಲ್ಲಿ ಗಾಳಿ ಇಲ್ಲ, ಮುಂದೆ ಹೋಗುತ್ತಿಲ್ಲ. ಸಿದ್ದರಾಮಯ್ಯಗೆ ಸರ್ಕಾರದ ಮೇಲೆ ಹಿಡಿತ ಇಲ್ಲ. ಸಿದ್ದರಾಮಯ್ಯ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ .ದಿನ ಬೆಳಿಗ್ಗೆಯಾದರೆ ಕಾಂಗ್ರೆಸ್ ನಾಯಕರು ಕಚ್ಚಾಡುತ್ತಾರೆ .ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ ಆಗಿದೆ. ಉಚಿತ ವಿದ್ಯುತ್ ಕೊಡ್ತೀವಿ ಅಂತ ಹೇಳಿ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಬರ ಪೀಡಿತ ಪ್ರದೇಶಗಳಿಗೆ ಸಿಎಂ, ಸಚಿವರು ಹೋಗಿಲ್ಲ. ಶಾಸಕರಿಗೆ ಕೇವಲ 50 ಲಕ್ಷ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಎಸ್ಸಿ, ಎಸ್ಟಿ ನಿಗಮಗಳಿಗೆ ಹಣ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕದ ಖರ್ಚು ರೈತನೇ ಭರಿಸಬೇಕು ಎಂಬ ಆದೇಶ ಹೊರಡಿಸಲು ಸರ್ಕಾರ ಹೊರಟಿದೆ. ಉಚಿತ ಬಸ್ ಹೊರತು ಬೇರೆ ಗ್ಯಾರಂಟಿ ಕೊಟ್ಟಿಲ್ಲ. ಅರ್ಧದಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ನಿಧಿ ಕೊಟ್ಟಿಲ್ಲ. ಇದು ಲೂಟಿ ಸರ್ಕಾರ, ಐಟಿ ದಾಳಿಯಿಂದ ಸರ್ಕಾರದ ಲೂಟಿ ಬಯಲಾಗಿದೆ. ಸಿದ್ದರಾಮಯ್ಯ- ಡಿಕೆಶಿ ಬಣಗಳ ನಡುವೆ ನಾಯಕತ್ವದ ಜಗ್ಗಾಟ ತಾರಕಕ್ಕೇರಿದೆ. ಮೊದಲಿಗಿಂತ ಹೆಚ್ಚು ವರ್ಗಾವಣೆ ದಂಧೆ ಮಿತಿಮೀರಿದೆ. ಡಿಸಿಎಂ ಕಟ್ಟಿ ಹಾಕಲು ಡಿನ್ನರ್ ಮೀಟಿಂಗ್ ಶುರುವಾಗಿದೆ ಎಂದು ಟೀಕಿಸಿದರು.
ಮಳೆ ಕೊರತೆ ಅರಿವಿದ್ದರೂ ಮುಂಜಾಗ್ರತಾ ಕ್ರಮ ವಹಿಸಲಿಲ್ಲ. ಭೀಕರ ಬರ ಪರಿಸ್ಥಿತಿ ಇದೆ. ಬರ ಪರಿಹಾರ ಕೊಡದೇ ಕೇಂದ್ರಕ್ಕೆ ಮೂದಲಿಸುವ ಕೆಲಸ ಮಾಡ್ತಿದ್ದಾರೆ. ಆಡಳಿತ ಯಂತ್ರ ಸರಿಪಡಿಸುವ ಬದಲು ವಿಪಕ್ಷಗಳ ಮೇಲೆ ಹರಿಹಾಯ್ತಿರೋದು ಪ್ರಜಾಪ್ರಭುತ್ವದ ಅಣಕ. ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಟೀಕೆ ಮಾಡ್ತಿದ್ದಾರೆ. ಕೇಂದ್ರ ಬರ ಪರಿಹಾರ ನಿಶ್ಚಿತವಾಗಿ ಕೊಡುತ್ತೆ. ಆದರೆ ಇವರು ಕೇಂದ್ರದ ಪರಿಹಾರಕ್ಕೆ ಕಾಯುತ್ತಿದ್ದಾರೆ. ಸಂಪನ್ಮೂಲಗಳ ಕೊರತೆಯಿಂದ ಎಲ್ಲದಕ್ಕೂ ಕೇಂದ್ರದ ಕಡೆ ನೋಡ್ತಿದ್ದಾರೆ. ಸುರ್ಜೇವಾಲಾ, ವೇಣುಗೋಪಾಲ ಕಲೆಕ್ಷನ್ ಟಾರ್ಗೆಟ್ ಕೊಡಲು ಭೇಟಿ ಕೊಟ್ಟಿದ್ದಾರೆ. ಇದು ಎಐಸಿಸಿಗೆ ಎಟಿಎಂ ಸರ್ಕಾರ ಆಗಿದೆ. ಮೋದಿಯವರನ್ನ ನಿತ್ಯ ಟೀಕಿಸೋದು ಸಿದ್ದರಾಮಯ್ಯ ಚಾಳಿಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಕಳೆದ ಒಂಬತ್ತು ವರ್ಷಗಳಲ್ಲಿ ಎನ್ ಡಿಆರ್‌ಎಫ್‌ನಡಿ 12,407 ಕೋಟಿ, ಎಸ್ ಡಿಆರ್‌ಎಫ್ ನಡಿ 3,377 ಕೋಟಿ ರೂ. ಹಣ ಕೇಂದ್ರ ಕೊಟ್ಟಿದೆ. ರಾಜ್ಯದಲ್ಲಿ 54 ಹೆದ್ದಾರಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಮುಂದಿನ ಮಾರ್ಚ್‌ಗೆ ಸಿದ್ಧವಾಗಲಿದೆ. ಹೀಗೆ ಹಲವು ಕಾಮಗಾರಿಗಳು ಕೇಂದ್ರದಿಂದ ರಾಜ್ಯದಲ್ಲಿ ನಡೆಯುತ್ತಿವೆ ಯಟಿಯೂರಪ್ಪ ತಿಳಿಸಿದರು.