ಬಿಜೆಪಿ ಸರ್ಕಾರದಲ್ಲಿ ಇದ್ದಾಗ ವಸೂಲಿ ಮಾಡಲೆಂದೇ ರಾಜ್ಯಕ್ಕೆ ಪದೇಪದೇ ಭೇಟಿ ನೀಡುತ್ತಿದ್ದರೇ?: ಜಿ.ಪರಮೇಶ್ವರ್ ತಿರುಗೇಟು

ಬೆಂಗಳೂರು: ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದ್ದಾಗ ವಸೂಲಿ ಮಾಡಲೆಂದೇ ರಾಜ್ಯಕ್ಕೆ ಪದೇಪದೇ ಭೇಟಿ ನೀಡುತ್ತಿದ್ದರೇ? ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಬಿಜೆಪಿಯವರಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕಲೆಕ್ಷನ್ ಮಾಡಲು ಬಂದಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ನಗರದಲ್ಲಿ ಮಾಧ್ಯಮಗಳಿಗೆ ತಿರುಗೇಟು ಕೊಟ್ಟ ಅವರು, ಬಿಜೆಪಿಯವರು ಅದನ್ನೇ ಹೇಳಬೇಕು. ಅದು ಬಿಟ್ಟು ಬೇರೇನು ಹೇಳಬೇಕು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅವರ ಕಾರ್ಯದರ್ಶಿಗಳು ರಾಜ್ಯಕ್ಕೆ ಬರ್ತಿದ್ದರು. ಹಾಗಾದ್ರೆ ಅವರೂ ಕಲೆಕ್ಷನ್ ಮಾಡೋಕೆ ಬರುತ್ತಿದ್ದರಾ? ಅವರು ಪದೇ ಪದೇ ಬರ್ತಿದ್ದರು. ಈಗ ನಾವು ಅವರೂ ಕೂಡ ಕಲೆಕ್ಷನ್‌ಗೆ ಬರ್ತಿದ್ದರು ಅಂತ ಹೇಳೋಣವಾವೇ? ಎಂದು ಪ್ರಶ್ನಿಸಿದರು.
ಇನ್ನು ಇದೇ ವೇಳೆ, ಬಿಜೆಪಿಯ ಬರ ಅಧ್ಯಯನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ಏನು ಮಾಡುತ್ತಿದ್ದರು? ಬರ ಶುರುವಾಗಿ 3 ತಿಂಗಳು ಆಯಿತು. ಮಳೆ ನಿಂತು 3 ತಿಂಗಳು ಆಯಿತು. ನಾವು ಈಗಾಗಲೇ 200ಕ್ಕೂ ಹೆಚ್ಚು ತಾಲೂಕು ಬರ ಎಂದು ಘೋಷಣೆ ಮಾಡಿದ್ದೇವೆ. 37,000 ಕೋಟಿ ರೂ. ನಷ್ಟ ಆಗಿದೆ. ಕೇಂದ್ರಕ್ಕೆ 17,000 ಕೋಟಿ ರೂ. ಬರ ಪರಿಹಾರ ಕೊಡಿ ಎಂದು ಮನವಿ ಮಾಡಿದ್ದೇವೆ. ಈವರೆಗೂ ಒಂದೇ ಒಂದು ರೂಪಾಯಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಈಗ ಬರ ಅಧ್ಯಯನ ಮಾಡಿ ಏನು ಮಾಡುತ್ತಾರೆ? ಬಿಜೆಪಿ ಅವರು ಕೇಂದ್ರಕ್ಕೆ ಹೇಳಿ ಹಣ ಕೊಡಿಸಲಿ ಎಂದು ಆಗ್ರಹಿಸಿದರು.