ನಿದ್ರೆಗೆ ಜಾರಿದ ಚಾಲಕ: ಸೇತುವೆಗೆ ಡಿಕ್ಕಿ ಹೊಡೆದ ಕಾರು: ಮೂವರು ಮಕ್ಕಳ ಸಹಿತ ನಾಲ್ವರು ಸಾವು

25/01/2024
ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಮೂವರು ಮಕ್ಕಳ ಸಹಿತ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ನಡೆದಿದೆ.
ಲಿಂಗಪ್ಪ(25), ಸಿಂಧುಶ್ರೀ(2) ಅಯ್ಯಾಳಪ್ಪ(5 ತಿಂಗಳು), ರಕ್ಷಾ(3 ತಿಂಗಳು) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತರು ರಾಯಚೂರು ಜಿಲ್ಲೆಯವರು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಯಲ್ಲಮ್ಮ(30), ಮಲ್ಲಮ್ಮ(20), ನಾಗಪ್ಪ(35) ಗಾಯಗೊಂಡಿದ್ದು, ಮಲ್ಲಮ್ಮ ಎಂಬವರ ಸ್ಥಿತಿ ಗಂಭೀರವಾಗಿದೆ. ಮೃತರೆಲ್ಲರೂ ಒಂದೇ ಕುಟುಂಬಸ್ಥರು ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ದೇವದುರ್ಗದ ದೊಂಡಂಬಳಿಗೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಇವರು ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಚಾಲಕ ನಿದ್ರೆ ಮಂಪರಿಗೆ ಜಾರಿದ್ದು, ಇದರಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.