4:30 PM Wednesday 22 - October 2025

ಹೆದ್ದಾರಿಯಲ್ಲಿ ನಿಂತ ನೀರು ತೆಗೆಯಿತು ಪ್ರಾಣ: ರಸ್ತೆ ಅಪಘಾತಕ್ಕೆ ಓರ್ವ ಬಲಿ, ಮತ್ತೊಬ್ಬನ ಸ್ಥಿತಿ ಗಂಭೀರ

mudigere accident
29/08/2025

ಚಿಕ್ಕಮಗಳೂರು: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮೂಡಿಗೆರೆ ಬಣಕಲ್ ನಡುವೆ ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಓರ್ವ ಯುವಕ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದ್ದು, ನಾಲ್ಕು ಮಂದಿ ತೀವ್ರ ಗಾಯಗೊಂಡಿದ್ದಾರೆ.

ಮೃತ ಯುವಕನನ್ನು ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಹುಯಿಲುಮನೆ ಗ್ರಾಮದ ರಮೇಶ್ ಸುಮತಿ ದಂಪತಿಗಳ ಪುತ್ರ ಅಕ್ಷಯ್ (22 ವರ್ಷ)  ಅದೇ ಗ್ರಾಮದ ವಿಕಾಸ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಣಕಲ್ ಮೂಡಿಗೆರೆ ನಡುವಿನ ಹೊರಟ್ಟಿ ಗ್ರಾಮದ ಚಿಂತನ್ ಹಿಟ್ಟಿನ ಗಿರಣಿ ಬಳಿ ಈ ದುರ್ಘಟನೆ ನಡೆದಿದೆ. ಮೂಡಿಗೆರೆ ಕಡೆಗೆ ಬರುತ್ತಿದ್ದ ಇಕೋ ಸ್ಪೋರ್ಟ್ಸ್ ಕಾರು ಮತ್ತು ಬೆಂಗಳೂರು ಕಡೆಯಿಂದ ಹೊರನಾಡು ಕಡೆಗೆ ತೆರಳುತ್ತಿದ್ದ ಕ್ರೆಟಾ ಕಾರುಗಳ ನಡುವೆ ಅಪಘಾತ ಸಂಭವಿಸಿದೆ.

ಮೃತ ಅಕ್ಷಯ್ ಮತ್ತು ಗಂಭೀರವಾಗಿ ಗಾಯಗೊಂಡ ವಿಕಾಸ್ ಇವರುಗಳು ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಇದ್ದರು. ಬೆಂಗಳೂರು ಮೂಲದ ಕಾರಿನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಕರೆದೊಯ್ಯಲಾಗಿದೆ. ಗಾಯಗೊಂಡವರನ್ನು ಗಂಗಯ್ಯ, ಹರ್ಷ,  ಶ್ರೀಮತಿ ವಿಜಯ ಎಂದು ಗುರುತಿಸಲಾಗಿದೆ.

ಮೃತ ಅಕ್ಷಯ್ ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಅಕ್ಷಯ್ ರಾಜಕೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಅಗ್ರಿ ಕಂಪನಿಯೊಂದರಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅಕ್ಷಯ್ ಒಂದು ವಾರದ ಹಿಂದಷ್ಟೇ ಇಕೋ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದರು ಎಂದು ತಿಳಿದುಬಂದಿದೆ.

ಅಪಘಾತ ನಡೆದ ಸ್ಥಳವು ನೇರವಾದ ರಸ್ತೆಯಾಗಿದೆ. ಆದರೂ ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ಚರಂಡಿ ನೀರು ರಸ್ತೆಯಲ್ಲಿ ನಿಲ್ಲುತ್ತಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ವೇಗವಾಗಿದ್ದ ಕಾರಿಗೆ ಬ್ರೇಕ್ ಹಾಕಿದಾಗ ರಸ್ತೆಯಲ್ಲಿ ನೀರಿದ್ದ ಕಾರಣ ನಿಯಂತ್ರಣ ತಪ್ಪಿ ಮತ್ತೊಂದು ಬದಿಗೆ ಬಂದಿದ್ದು, ಎದುರಿನಿಂದ ಬರುತ್ತಿದ್ದ ಕಾರು ವೇಗವಾಗಿ ಡಿಕ್ಕಿ ಹೊಡೆದದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಅವೈಜ್ಞಾನಿಕ ಕಾಮಗಾರಿಯೇ ಈ ಅಪಘಾತಕ್ಕೆ ಕಾರಣವಾಗಿದೆ ಸಾರ್ಜಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವತ್ತಿನ ಬಡವನದಿಣ್ಣೆ ರಸ್ತೆ ಅಪಘಾತಕ್ಕೆ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ರಸ್ತೆ ಬದಿಯಲ್ಲಿ ನೀರು ಹರಿದು ಹೋಗದೆ ರಸ್ತೆಯಲ್ಲಿ ನೀರು ನಿಲ್ಲುವ ಪರಿಣಾಮ .ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದರ ಸಂಪೂರ್ಣ ಜವಾಬ್ದಾರಿ ಆಗಿರುತ್ತಾರೆ. ಸಂಬಂಧ ಪಟ್ಟ ಕಾಮಗಾರಿ ಮಾಡಿದ ಗುತ್ತಿಗೆದಾರರು ಮಾಡಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಮೇಲ್ಗಡೆ ಗದ್ದೆಯಿಂದ ಬರುವ ಜಲದ ನೀರು ಮಳೆಯಿಂದ ತುಂಬಿರುತ್ತೆ, ನೀರು ಹರಿದು ಹೋಗುವುದಕ್ಕೆ ಸರಿಯಾದ ಚರಂಡಿ ಜೊತೆಗೆ ಮೋರಿಗಳ ಕೆಲಸ ಆಗಿಲ್ಲ ಅವೈಜ್ಞಾನಿಕ ಕಾಮಗಾರಿ  ಎದ್ದು ಕಾಣುತ್ತದೆ. ಮಾನ್ಯ ಸ್ಥಳೀಯ ಸಂಸದರು ಇದರ ಬಗ್ಗೆ ಹ್ಯಾಂಡಪೋಸ್ಟ್ ನಿಂದ ಕೊಟ್ಟಿಗೆಹಾರದ ತನಕ ರಸ್ತೆ ಗುಣಮಟ್ಟ ಹಾಗೂ ರಸ್ತೆ ಬದಿಯ ಚರಂಡಿ ವ್ಯವಸ್ಥೆಗಳ ಬಗ್ಗೆ ನಿಗಾ ವಹಿಸಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸ ಬೇಕೆಂದು ನೊಂದ ಪಾಲಕರ ಪರವಾಗಿ  ಕೇಳಿಕೊಳ್ಳುತ್ತೇನೆ ಎಂದು ಜಗದೀಪ್. ಕೆ. ಎಂ, ಹಂಡುಗುಳಿ, ಮೂಡಿಗೆರೆ ಇವರು ಮನವಿ ಮಾಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version