SIR ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾದ ರಾಜ್ಯ ಸರ್ಕಾರ

sir
22/05/2026

ಬೆಂಗಳೂರು: ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಮುಂದಿನ 3 ರಿಂದ 4 ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “SIR ಪ್ರಕ್ರಿಯೆ ಕುರಿತಂತೆ ಸರ್ಕಾರ ಎಲ್ಲ ಕಾನೂನಾತ್ಮಕ ಆಯ್ಕೆಗಳನ್ನೂ ಪರಿಶೀಲಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆಯ ಮಧ್ಯದಲ್ಲೇ ಸುಪ್ರೀಂ ಕೋರ್ಟ್‌ಗೆ ಹೋಗಬೇಕೇ ಅಥವಾ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ನ್ಯಾಯಾಲಯದ ಮೊರೆ ಹೋಗಬೇಕೇ ಎಂಬ ಕುರಿತು ಚರ್ಚೆ ನಡೆದಿದೆ. ಮುಂದಿನ ಮೂರು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು” ಎಂದರು.

ಯಾವುದೇ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಥವಾ ಕಡಿತಗೊಳಿಸುವ ಪ್ರಯತ್ನ ನಡೆದರೆ, ಅದನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸದ್ಯ ನಡೆಯುತ್ತಿರುವ SIR ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಇತರ ರಾಜ್ಯಗಳಲ್ಲಿ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ತೆಗೆದುಹಾಕಿರುವ ಘಟನೆಗಳು ನಡೆದಿವೆ. ಇಂತಹ ಕ್ರಮಗಳು ಚುನಾವಣಾ ವ್ಯವಸ್ಥೆಯ ಮೇಲಿನ ಜನರ ನಂಬಿಕೆಗೆ ಧಕ್ಕೆ ತರುತ್ತವೆ ಎಂದು ಹೆಚ್.ಕೆ. ಪಾಟೀಲ್ ಆತಂಕ ವ್ಯಕ್ತಪಡಿಸಿದರು.

ಚುನಾವಣಾ ಆಯೋಗದ ಬಳಿ ಹೋಗುವ ಬದಲು ನೇರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಮಗಿರುವ ದಾರಿ ಸುಪ್ರೀಂ ಕೋರ್ಟ್ ಒಂದೇ” ಎಂದು ಸ್ಪಷ್ಟಪಡಿಸಿದರು.

SIR ಪ್ರಕ್ರಿಯೆ ಕುರಿತು ಸರ್ಕಾರ ಈಗಾಗಲೇ 10 ರಿಂದ 12 ಪ್ರಮುಖ ಆಕ್ಷೇಪಣೆಗಳನ್ನು ಗುರುತಿಸಿದೆ. ಆದರೆ ಅವುಗಳ ವಿವರಗಳನ್ನು ಬಹಿರಂಗಪಡಿಸಲು ಸಚಿವರು ಸದ್ಯ ನಿರಾಕರಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರೊಂದಿಗೆ ಭಾನುವಾರ ಮತ್ತೊಂದು ಸುತ್ತಿನ ಮಹತ್ವದ ಚರ್ಚೆ ನಡೆಯಲಿದ್ದು, ಮೇ 25ರೊಳಗೆ ಸರ್ಕಾರದ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version