ಹೈದರಾಬಾದ್: ಜೇಮ್ಸ್ ಬಾಂಡ್ ಸಿನಿಮೀಯ ಶೈಲಿಯಲ್ಲಿ ನಂಬರ್ ಪ್ಲೇಟ್ ಬದಲಿಸಿದ ಮದ್ಯಪಾನಿ ವೈದ್ಯ; ಪೊಲೀಸರೇ ಶಾಕ್!

flip number plate
14/04/2026

ಹೈದರಾಬಾದ್: ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅಥವಾ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಕಾರಿನ ನಂಬರ್ ಪ್ಲೇಟ್‌ಗಳು ಕ್ಷಣಾರ್ಧದಲ್ಲಿ ಬದಲಾಗುವುದನ್ನು ನೀವು ನೋಡಿರಬಹುದು. ಆದರೆ ಹೈದರಾಬಾದ್‌ನಲ್ಲಿ ಇಂತಹದ್ದೇ ಒಂದು ಘಟನೆ ನಿಜವಾಗಿಯೂ ನಡೆದಿದ್ದು, ಪೊಲೀಸರೇ ದಂಗಾಗಿದ್ದಾರೆ.

ಹೈದರಾಬಾದ್‌ನ ಐಷಾರಾಮಿ ಪ್ರದೇಶವಾದ ಜುಬಿಲಿ ಹಿಲ್ಸ್‌ ನಲ್ಲಿ ಶನಿವಾರ ರಾತ್ರಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಿಎಂಡಬ್ಲ್ಯು (BMW) ಕಾರೊಂದನ್ನು ತಡೆದ ಪೊಲೀಸರು, ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಬ್ರೀತ್ ಅನಲೈಸರ್ ಪರೀಕ್ಷೆ ಮಾಡಲು ಸೂಚಿಸಿದರು. ಆ ಸಮಯದಲ್ಲಿ ಕಾರಿನಲ್ಲಿದ್ದ ವ್ಯಕ್ತಿ ರಿಮೋಟ್ ಕಂಟ್ರೋಲ್ ಬಳಸಿ ಕ್ಷಣಾರ್ಧದಲ್ಲಿ ತನ್ನ ಕಾರಿನ ನಂಬರ್ ಪ್ಲೇಟ್ ಅನ್ನು ಬದಲಾಯಿಸಿದ್ದಾನೆ.

ಬಂಧಿತ ವ್ಯಕ್ತಿಯನ್ನು ಗೌತಮ್ ರೆಡ್ಡಿ ಎಂಬ ವೈದ್ಯ ಎಂದು ಗುರುತಿಸಲಾಗಿದೆ. ಈತನ ಕಾರಿನಲ್ಲಿ ಅಳವಡಿಸಲಾಗಿದ್ದ ವಿಶೇಷ ತಂತ್ರಜ್ಞಾನದ ಮೂಲಕ, ಕೇವಲ ಒಂದು ಬಟನ್ ಒತ್ತಿದರೆ ಸಾಕು, ನಂಬರ್ ಪ್ಲೇಟ್ ತಿರುಗುತ್ತಿತ್ತು (Flip). ಒಂದು ಕಡೆ ತೆಲಂಗಾಣ ನೋಂದಣಿ ಸಂಖ್ಯೆ (TS9FQ9999) ಇದ್ದರೆ, ಮತ್ತೊಂದು ಕಡೆ ದೆಹಲಿ ನೋಂದಣಿ ಸಂಖ್ಯೆ (DL6CM7097) ಇತ್ತು. ಪೊಲೀಸರ ಕಣ್ಣಿಗೆ ಮಣ್ಣೆರಚಲು ಮತ್ತು ಟ್ರಾಫಿಕ್ ಚಲನ್ ಅಥವಾ ಸಿಸಿಟಿವಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಈತ ಈ ತಂತ್ರ ಹೂಡಿದ್ದ ಎಂದು ತಿಳಿದುಬಂದಿದೆ.

ಪೊಲೀಸರು ನಡೆಸಿದ ತಪಾಸಣೆಯಲ್ಲಿ ವೈದ್ಯ ಗೌತಮ್ ರೆಡ್ಡಿ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಅವರ ರಕ್ತದಲ್ಲಿ ಮದ್ಯದ ಪ್ರಮಾಣ ನಿಗದಿತ ಮಿತಿಗಿಂತ (137 mg) ಹೆಚ್ಚಿತ್ತು. ಪೊಲೀಸರು ಈತನ ವಿರುದ್ಧ ವಂಚನೆ, ಸೋಗು ಹಾಕುವುದು ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಂತಹ ಅಕ್ರಮ ತಂತ್ರಜ್ಞಾನವನ್ನು ಕಾರಿನಲ್ಲಿ ಅಳವಡಿಸಿಕೊಟ್ಟ ಖಾಸಗಿ ಕಾರ್ ಡೆಕೋರ್ ಅಂಗಡಿಯ ಮೇಲೆಯೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಡಿಜಿಟಲ್ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಇಷ್ಟು ಸುಧಾರಿತ ವ್ಯವಸ್ಥೆಯನ್ನು ಬಳಸಿರುವುದು ತನಿಖಾಧಿಕಾರಿಗಳಿಗೂ ಅಚ್ಚರಿ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version