1:33 AM Tuesday 2 - September 2025

ಇಬ್ಬರು ಮಾವುತರ ಮೇಲೆ ದಾಳಿ ನಡೆಸಿದ ದೇವಸ್ಥಾನದ ಆನೆ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

elephant
02/09/2025

ಆಲಪ್ಪುಳ: ಕೇರಳದ ಕರಾವಳಿ ಜಿಲ್ಲೆಯ ಹರಿಪಾದ್‌ ನಲ್ಲಿರುವ ದೇವಸ್ಥಾನದಲ್ಲಿರುವ ಆನೆ ಇಬ್ಬರು ಮಾವುತರ ಮೇಲೆ ಭೀಕರ ದಾಳಿ ನಡೆಸಿದ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಮಾವುತ ಸಾವನ್ನಪ್ಪಿದ್ದರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.

ನೂರಾನಾಡ್‌ ‌ನ ಎಡಪ್ಪೊನ್ಮುರಿಯ ನಿವಾಸಿ ಮುರಳೀಧರನ್ ನಾಯರ್ (53) ಮೃತಪಟ್ಟ ಆನೆ ಮಾವುತರಾಗಿದ್ದಾರೆ.   ಪೊಲೀಸರ ಪ್ರಕಾರ, ಈತ ಹರಿಪಾದ್‌ ನ ಸುಬ್ರಹ್ಮಣ್ಯ ದೇವಸ್ಥಾನದ ಒಡೆತನದ ಸ್ಕಂದನ್ ಎಂಬ ಆನೆಯ ಮುಖ್ಯ ನಿರ್ವಾಹಕನಾಗಿದ್ದ. ಮದವೇರಿದ್ದ ಆನೆಯನ್ನು ಕಳೆದ ಕೆಲವು ತಿಂಗಳುಗಳಿಂದ ದೇವಾಲಯದ ಅರ್ಚಕರ ಮನೆಯಲ್ಲಿಯೇ ಕಟ್ಟಿಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಸ್ಕಂದನ್ ಆನೆ ಏಕಾಏಕಿಯಾಗಿ ಮತ್ತೊಬ್ಬ ಮಾವುತ ಸುನೀಲ್ ಕುಮಾರ್ ಮೇಲೆ ದಾಳಿ ಮಾಡಿದೆ. ಆಗ ಮುರಳೀಧರನ್ ಸ್ಥಳಕ್ಕೆ ಧಾವಿಸಿ ಆರಂಭದಲ್ಲಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ದಾಳಿಯಲ್ಲಿ ಸುನೀಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮಧ್ಯಾಹ್ನ 3.30 ರ ಸುಮಾರಿಗೆ ಆನೆಯನ್ನು ದೇವಸ್ಥಾನಕ್ಕೆ ಸ್ಥಳಾಂತರಿಸುವಾಗ, ಸ್ಕಂದನ್ ಮತ್ತೆ ಮುರಳೀಧರನ್ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಫ್‌ ಐಆರ್ ಪ್ರಕಾರ, ಆನೆ ಮುರಳೀಧರನ್ ಅವರನ್ನು ಹಲವಾರು ನಿಮಿಷಗಳ ಕಾಲ ತನ್ನ ತಲೆಯಿಂದ ನೆಲಕ್ಕೆ ಒತ್ತಿ ಹಿಡಿದಿತ್ತು. ಇತರ ಮಾವುತರು ಆನೆಯನ್ನು ನಿಗ್ರಹಿಸುವಲ್ಲಿ ಯಶಸ್ವಿಯಾದರು ಮತ್ತು ಮುರಳೀಧರನ್ ಅವರನ್ನು ಪರುಮಲದಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ರಾತ್ರಿ 11 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಪಾದ್ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಸುನಿಲ್ ಕುಮಾರ್ ಅವರ ಸ್ಥಿತಿ ಗಂಭೀರವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version