ತರುವೆ ಗ್ರಾ.ಪಂ: ನಿವೇಶನಕ್ಕಾಗಿ ಟೆಂಟ್ ನಿರ್ಮಿಸಿ ನಿವೇಶನ ರಹಿತರಿಂದ ಪ್ರತಿಭಟನೆ | ಅಧಿಕಾರಿಗಳ ವಿರುದ್ಧ ಆಕ್ರೋಶ
ಕೊಟ್ಟಿಗೆಹಾರ: ಕೊಟ್ಟಿಗೆಹಾರದ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜಾದ್ ನಗರ ಬಳಿ ಮೀಸಲು ಅರಣ್ಯ, ಡೀಮ್ಡ್ ಅರಣ್ಯದ ಖಾಲಿ ಜಾಗಕ್ಕೆ ಸ್ಥಳೀಯ ನಿವೇಶನ ರಹಿತರು 50ಕ್ಕೂ ಅಧಿಕ ಮಂದಿ ಟೆಂಟ್ ನಿರ್ಮಿಸಿ ನಿವೇಶನ ನೀಡುವಂತೆ ಒತ್ತಾಯಿಸಿ ಮಂಗಳವಾರ ಹೋರಾಟದ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆ ಹರಿಸುವಂತೆ ಪಟ್ಟು ಹಿಡಿದರು.
ನಿವೇಶನ ರಹಿತರ ಪರವಾಗಿ ಗ್ರಾಮಸ್ಥ ಕಿರಣ್ ಮಾತನಾಡಿ, ತರುವೆ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ರಹಿತರಿಗೆ 24 ವರ್ಷಗಳಿಂದ ನಿವೇಶನ ನೀಡದೇ ಸತಾಯಿಸಲಾಗುತ್ತಿದೆ. ನಿವೇಶನ ರಹಿತರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪಂಚಾಯಿತಿಗೆ ಅರ್ಜಿ ನೀಡಿದ್ದರೂ ಅದು ಮೂಲೆ ಸೇರಿದೆ. ಸ.ನಂ.106ರಲ್ಲಿ ನಿವೇಶನಕ್ಕಾಗಿ ಸ್ಥಳ ಕಾದಿರಿಸಿದ್ದು, ಕಂದಾಯ ಜಾಗದಲ್ಲಿ ಅರಣ್ಯ ಇಲಾಖೆ ಬಹಳ ವರ್ಷಗಳ ಹಿಂದೆ ಗಿಡಗಳನ್ನು ನೆಟ್ಟು ಬೆಳೆಸಿದೆ. ಅದನ್ನು ನಿವೇಶನ ರಹಿತರಿಗೆ 4.5ಎಕರೆ ಕಂದಾಯ ಭೂಮಿ ಮಂಜೂರಾಗಿದ್ದರೂ, ಅರಣ್ಯ ಇಲಾಖೆ ಮರ ತೆರವು ಮಾಡದೇ 14 ವರ್ಷಗಳಿಂದ ಮಂಜೂರಾತಿ ನೀಡಿ ಮರ ತೆರವುಗೊಳಿಸಲು ಮೀನಾಮೇಷ ಎಣಿಸುತ್ತಿದೆ ಎಂದರು.
ಗ್ರಾಮ ಪಂಚಾಯಿತಿಗೆ ಸ್ಥಳ ಪರಬಾರೆ ಮಾಡದೇ ಜನರಲ್ಲಿ ಜಾಗದ ಗೊಂದಲ ಉಂಟಾಗಿದೆ. ಇದರಿಂದ ಇಷ್ಟು ವರ್ಷ ಕಾದರೂ ನಿವೇಶನ ನೀಡದೇ ಇರುವುದರಿಂದ ಸ.ನಂ104 ರಲ್ಲಿ ಖಾಲಿ ಜಾಗದಲ್ಲಿ ಗ್ರಾಮಸ್ಥರು ಮಂಗಳವಾರ ಟೆಂಟ್ ಹಾಕಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ನಿವೇಶನಕ್ಕೆ ತೊಂದರೆಯಾಗಿದೆ ಎಂದರು.
ಗ್ರಾಮಸ್ಥರಾದ ಶರಣ್ಯ, ಪೂರ್ಣಿಮಾ ಮಾತನಾಡಿ, ನಾವು ಖಾಲಿ ಇರುವ ಜಾಗಕ್ಕೆ ಟೆಂಟ್ ಹಾಕಿದ್ದೇವೆ. ನಮಗೆ ನಿವೇಶನಕ್ಕೆ ಅಧಿಕಾರಿಗಳು ಸ.ನಂ.106ರಲ್ಲಿ ಸ್ಥಳ ನೀಡದೇ ಅರಣ್ಯ ಇಲಾಖೆ ಮರ ತೆರವು ಮಾಡದೇ ಹತ್ತು ವರ್ಷ ಕಳೆದಿದೆ. ಮೂರು ಬಾರಿ ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಪಂದಿಸಿಲ್ಲ. ಇದರಿಂದ ಸ.ನಂ.104 ರಲ್ಲಿ ಜಾಗ ಖಾಲಿ ಇದ್ದುದರಿಂದ ಇಲ್ಲಿ ನಿವೇಶನ ಕೊಡುವಂತೆ ಒತ್ತಾಯಿಸುತ್ತಿದ್ದೇವೆ. ಅಧಿಕಾರಿಗಳು ಬರೀ ಆಶ್ವಾಸನೆ ನೀಡಿ ಹೋಗುತ್ತಾರೆ. ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಇತ್ಯರ್ಥವಾಗುವವರೆಗೂ ನಾವು ಇಲ್ಲಿಂದ ಟೆಂಟ್ ತೆಗೆದು ಹೋಗಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಬಂದ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ನಿವೇಶನ ರಹಿತರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಬಳಿಕ ಎಸಿಎಫ್ ಆಕರ್ಷ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರಲ್ಲಿ ಮಾತನಾಡಿ, ನಿಮಗೆ ಮಂಜೂರಾದ ಜಾಗದ ಪೈಲ್ ಬೆಂಗಳೂರಿಗೆ ಹೋಗಿದೆ. ಅದರ ಬಗ್ಗೆ ನಾವು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ನಿಮಗೆ ಜಾಗದ ಇತ್ಯರ್ಥ ನಡೆಸಿ ಸ್ಥಳ ನೀಡಲು ಪ್ರಯತ್ನ ನಡೆಸುತ್ತೇವೆ. ಅರಣ್ಯ ಜಾಗದಲ್ಲಿ ಹಾಕಿದ ಟೆಂಟ್ ತೆಗೆಯಿರಿ. ಯಾವುದೇ ಕೆಲಸವನ್ನು ಕಾನೂನು ರೀತಿಯಲ್ಲಿ ಮಾಡಬೇಕು. ಈ ಕಾನೂನು ಬಾಹಿರ ಕೆಲಸ ಮಾಡಬೇಡಿ, ಸಂಬಂಧಿತ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ನಿಮಗೆ ನ್ಯಾಯ ಒದಗಿಸುತ್ತೇವೆ ಎಂದರು.
ಮೂಡಿಗೆರೆ ತಾಲ್ಲೂಕು ಇಒ ದಯಾವತಿ ಮಾತನಾಡಿ, ನೀವು ಹಾಕಿರುವ ಬೇಡಿಕೆ ಸರಿಯಾಗಿದೆ. ಕಾನೂನು ರೀತಿಯಲ್ಲಿ ಈ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸ.ನಂ106 ರ ಜಾಗದ ಬಗ್ಗೆ ನಾವು ಮತ್ತೊಮ್ಮೆ ಪರಿಶೀಲಿಸಿ ಅರಣ್ಯ ಇಲಾಖೆಯೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇವೆ. ಸ್ವಲ್ಪ ಸಮಯ ಕೊಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಬಳಿಕ ಗ್ರಾಮಸ್ಥರು ಸಮಸ್ಯೆ ಬಗೆಹರಿಯದಿದ್ದರೆ ಮತ್ತೇ ಹೋರಾಟಕ್ಕೆ ಇಳಿಯುವುದಾಗಿ ಅಧಿಕಾರಿಗಳನ್ನು ಎಚ್ಚರಿಸಿ, ನಿವೇಶನ ರಹಿತರಿಗೆ ಆದಷ್ಟು ಬೇಗ ಜಾಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಹಾಕಿದ ಟೆಂಟನ್ನು ತೆರವುಗೊಳಿಸಿದರು. ಸ್ಥಳದಲ್ಲಿ ಡಿ ಆರ್ ಎಫ್ ಒ ಜಿ.ಮಂಜುನಾಥ್,ವಲಯ ಅರಣ್ಯಾಧಿಕಾರಿಗಳಾದ ರಂಜಿತ್, ಸುಹಾಸ್, ಬಸವರಾಜ್, ಪರಮೇಶ್, ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಪಂಪನಾ, ತರುವೆ ಪಿಡಿಒ ಸಿಂಚನಾ, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























