ದುರಂತ: ಶೃಂಗೇರಿಯಲ್ಲಿ 20 ಅಡಿ ಆಳದ ತೆರೆದ ಬಾವಿಗೆ ಬಿದ್ದು ಎರಡು ಎತ್ತುಗಳು ಸಾವು!
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಮೇಯಲು ಹೋಗಿದ್ದ ಎರಡು ಎತ್ತುಗಳು ಆಕಸ್ಮಿಕವಾಗಿ 20 ಅಡಿ ಆಳದ ತೆರೆದ ಬಾವಿಗೆ ಬಿದ್ದು, ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶೃಂಗೇರಿ ತಾಲೂಕಿನ ಹಲಗಾರ್ ಆಲಂದೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಾಲುದಾರಿಯ ಪಕ್ಕದಲ್ಲೇ ಇದ್ದ ತೆರೆದ ಬಾವಿಯಲ್ಲಿ ಮೇಯುತ್ತಿದ್ದ ಎತ್ತುಗಳು ಆಕಸ್ಮಿಕವಾಗಿ ಒಳಗೆ ಬಿದ್ದಿವೆ. ಬಾವಿಯ ತಳದಲ್ಲಿದ್ದ ಭಾರಿ ಪ್ರಮಾಣದ ಕೆಸರಿನಲ್ಲಿ ಸಿಲುಕಿಕೊಂಡ ಎತ್ತುಗಳು, ಪ್ರಾಣ ಉಳಿಸಿಕೊಳ್ಳಲು ತೀವ್ರವಾಗಿ ಹೋರಾಟ ನಡೆಸಿದವು. ಎತ್ತುಗಳು ಬಾವಿಯೊಳಗೆ ಬಿದ್ದು ನರಳಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ತಕ್ಷಣವೇ ರಕ್ಷಣಾ ಕಾರ್ಯಚರಣೆಗೆ ಇಳಿದರು. ಸುಮಾರು ಎರಡು ಗಂಟೆಗಳ ಕಾಲ ಎತ್ತುಗಳನ್ನು ಹೊರತರಲು ಸುಧೀರ್ಘ ಹಾಗೂ ಅತ್ಯಂತ ಕಠಿಣ ಹೋರಾಟ ನಡೆಸಲಾಯಿತು. ಆದರೆ, ದುರದೃಷ್ಟವಶಾತ್ ಬಾವಿಯ ಕೆಸರಿನಲ್ಲಿ ಉಸಿರುಗಟ್ಟಿದ್ದರಿಂದ, ಸಿಬ್ಬಂದಿಗಳ ಹೋರಾಟದ ನಡುವೆಯೂ ಎತ್ತುಗಳು ಕೊನೆಯುಸಿರೆಳೆದವು. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಎರಡು ಎತ್ತುಗಳು ದುರಂತ ಅಂತ್ಯ ಕಂಡಿವೆ.
ಜನರು ಮತ್ತು ಜಾನುವಾರುಗಳು ಓಡಾಡುವ ಕಾಲುದಾರಿಯ ಪಕ್ಕದಲ್ಲೇ ಇಂತಹ ಅಪಾಯಕಾರಿ ತೆರೆದ ಬಾವಿ ಇರುವುದೇ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ತಕ್ಷಣವೇ ಈ ತೆರೆದ ಬಾವಿಯನ್ನು ಮುಚ್ಚಬೇಕು ಎಂದು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ಬಲವಾಗಿ ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























