ಪಾಕಿಸ್ತಾನವನ್ನು ಬೆಂಬಲಿಸಿದ ಟರ್ಕಿಗೆ ಶುರುವಾಯ್ತು ಭಯ: ಭಾರತದ ಏಟಿಗೆ ತತ್ತರಿಸಲಿದೆ ಟರ್ಕಿ!

turkish
15/05/2025

ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿಗೆ ಭಾರತ ಆರ್ಥಿಕ ಹೊಡೆತ ನೀಡಲು ಆರಂಭಿಸಿದ್ದು, ಭಾರತದ ಒಂಬತ್ತು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಿಂಹಪಾಲು ಸೇವೆಗಳನ್ನು ನಿರ್ವಹಿಸುವ ಟರ್ಕಿಶ್ ಸಂಸ್ಥೆಯು ತನ್ನ ಭದ್ರತಾ ಅನುಮತಿಯನ್ನು ಕಳೆದುಕೊಂಡಿದೆ.

ಸೆಲೆಬಿ ಗ್ರೌಂಡ್ ಹ್ಯಾಂಡ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ನ ಭದ್ರತಾ ಅನುಮತಿಯನ್ನು “ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ” ಎಂದು  ಭಾರತದ ನಾಗರಿಕ ವಿಮಾನಯಾನ ಸಚಿವಾಲವು ಇಂದು ಸಂಜೆ  ಆದೇಶ ನೀಡಿದೆ.

ದೆಹಲಿ ವಿಮಾನ ನಿಲ್ದಾಣವು ಸೆಲೆಬಿಯೊಂದಿಗಿನ ಸಂಬಂಧವನ್ನು ಸಹ ಕಡಿದುಕೊಂಡಿದೆ, ಇದು ಸೆಲೆಬಿ ಏವಿಯೇಷನ್ ​​– ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ ಮೆಂಟ್ ಇಂಡಿಯಾ – ಪ್ರತ್ಯೇಕ ಘಟಕದ ಅಡಿಯಲ್ಲಿ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸೇವೆಗಳನ್ನು ನೋಡಿಕೊಳ್ಳುತ್ತದೆ.  ಟರ್ಕಿಶ್ ಸಂಸ್ಥೆಯ ವಿರುದ್ಧ ಭಾರತ ತೆಗೆದುಕೊಂಡ ಮೊದಲ ಬಹಿರಂಗ ಕ್ರಮ ಇದಾಗಿದೆ.

ಇನ್ನೊಂದೆಡೆಯಲ್ಲಿ ಟರ್ಕಿ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮವನ್ನು ಕಡಿತಗೊಳಿಸುವುದು ಸೇರಿದಂತೆ ಟರ್ಕಿಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಲಾಗುತ್ತಿದೆ. ಅತೀ ಹೆಚ್ಚು ಪ್ರವಾಸಿಗರು ಟರ್ಕಿಗೆ ಭೇಟಿ ನೀಡುತ್ತಿದ್ದರು. ಆದರೆ ಟರ್ಕಿ ದೇಶದ ನಡವಳಿಕೆಯ ನಂತರ ಭಾರತ ದೇಶದ ಪ್ರವಾಸಿಗರು ಟರ್ಕಿಗೆ ಪ್ರವಾಸವನ್ನು ರದ್ದುಗೊಳಿಸುತ್ತಿರುವುದು, ಟರ್ಕಿಗೆ ನೀಡುತ್ತಿರುವ ಆರ್ಥಿಕ ಆಘಾತವಾಗಿದೆ.

ಕಳೆದ ಕೆಲವು ದಿನಗಳಿಂದ, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಸೇರಿದಂತೆ ಭಾರತದ ಹಲವಾರು ಪ್ರಮುಖ ವಿಶ್ವವಿದ್ಯಾಲಯಗಳು ಟರ್ಕಿಯ ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದಗಳು ಮತ್ತು ಕಾರ್ಯಕ್ರಮಗಳನ್ನು ರದ್ದುಗೊಳಿಸಿವೆ.

ವ್ಯಾಪಾರ ಸಂಘಗಳು ಮತ್ತು ಪ್ರವಾಸ ನಿರ್ವಾಹಕರು ಟರ್ಕಿಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಅನೇಕ ಪ್ರಯಾಣ ವೆಬ್‌ ಸೈಟ್‌ ಗಳು ಟರ್ಕಿಯ ಪ್ರಯಾಣದ ವೇಳಾಪಟ್ಟಿಗಳನ್ನು ರದ್ದುಗೊಳಿಸುತ್ತಿವೆ/ಸ್ವೀಕರಿಸುತ್ತಿಲ್ಲ — ಇದು ಪ್ರವಾಸೋದ್ಯಮದ ಮೂಲಕ ತನ್ನ ಆದಾಯದ ಶೇಕಡಾ 12 ರಷ್ಟು ಗಳಿಸುವ ರಾಷ್ಟ್ರಕ್ಕೆ ಹೊಡೆತ ನೀಡುವ ನಿರೀಕ್ಷೆಯಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version