ನಾಯಿಯಿಂದ ತಪ್ಪಿಸಿಕೊಳ್ಳಲು ಓಡಿದ ಇಬ್ಬರು ಮಕ್ಕಳು ರೈಲಿನಡಿಗೆ ಬಿದ್ದು ಸಾವು

20/01/2024
ಜೋಧಪುರ: ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಶಾಲಾ ಮಕ್ಕಳಿಬ್ಬರು ಗೂಡ್ಸ್ ರೈಲಿನಡಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಬನಾರ್ ಪ್ರದೇಶದಲ್ಲಿ ನಡೆದಿದೆ.
ಅನನ್ಯ ಕನ್ವರ್(9) ಮತ್ತು ಯವರಾಜ್ ಸಿಂಗ್ (11) ಮೃತಪಟ್ಟವರಾಗಿದ್ದಾರೆ. ಮೃತ ಮಕ್ಕಳು ಸಹೋದರ ಸಂಬಂಧಿಗಳಾಗಿದ್ದು, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಲೆ ಮಾರ್ಗ ಮಧ್ಯೆ ಸಾಕು ನಾಯಿಗಳು ಅಟ್ಟಿಕೊಂಡು ಬಂದಿದ್ದವು.
ನಾಯಿಯಿಂದ ತಪ್ಪಿಸಿಕೊಳ್ಳಲು ಇಬ್ಬರೂ ಓಡಿದ್ದು, ರೈಲು ಬರುವುದನ್ನು ಗಮನಿಸದೇ ಹಳಿಗಳನ್ನು ಪ್ರವೇಶಿಸಿದ್ದಾರೆ. ಈ ವೇಳೆ ವೇಗವಾಗಿ ಬರುತ್ತಿದ್ದ ಗೂಡ್ಸ್ ರೈಲು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದು, ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ನಂತರ ಜೋಧಪುರ ನಗರಸಭೆಯ ಶ್ವಾನದಳದ ಸಿಬ್ಬಂದಿ ನಾಯಿಗಳನ್ನು ಸೆರೆ ಹಿಡಿದಿದ್ದಾರೆ. ನಾಯಿ ಮಾಲಕರ ವಿರುದ್ಧ ಕ್ರಮ ಜರಗಿಸುವಂತೆ ಪೋಷಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.