ಪೊಲೀಸ್ ಸಿಬ್ಬಂದಿಯ ಅಪ್ರಾಪ್ತ ಮಗಳನ್ನು ಅಪಹರಿಸಿ ಅತ್ಯಾಚಾರ: ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳ ಬಂಧನ
ಭೋಪಾಲ್: ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಯ ಅಪ್ರಾಪ್ತ ಮಗಳನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಗಂಭೀರ ಆರೋಪದ ಮೇಲೆ ಮಧ್ಯಪ್ರದೇಶದಲ್ಲಿ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಬಂಧಿಸಲಾಗಿದೆ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯನ್ನು ಸಂಚು ರೂಪಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ.
ಮಧ್ಯಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಸಿಬ್ಬಂದಿ ಸಂತೋಷ್ ಸೇನ್ ಹಾಗೂ ಗ್ವಾಲಿಯರ್ ಮೂಲದ ಕಾನ್‌ಸ್ಟೇಬಲ್ ಜಿತೇಂದ್ರ ರಜಪೂತ್ ಬಂಧಿತ ಆರೋಪಿಗಳು.
ತನ್ನ ಮಗಳ ಹುಟ್ಟುಹಬ್ಬದ ಆಚರಣೆಗೆ ಬರುವಂತೆ ಆರೋಪಿ ಸಂತೋಷ್ ಸೇನ್ ಬಾಲಕಿಗೆ ಆಮಿಷ ಒಡ್ಡಿದ್ದ. ಪರಿಚಿತ ವ್ಯಕ್ತಿಯಾಗಿದ್ದರಿಂದ ಬಾಲಕಿ ಆತನ ಮಾತನ್ನು ನಂಬಿ ಬಂದಿದ್ದಳು.
ಲಾಲ್ ಪೆರೇಡ್ ಗ್ರೌಂಡ್ ಸಮೀಪಕ್ಕೆ ಬಂದ ಬಾಲಕಿಯನ್ನು ಕಾರಿನಲ್ಲಿ ಎಂ.ಪಿ. ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. ಕಾರಿನಲ್ಲಿ ಜಿತೇಂದ್ರ ರಜಪೂತ್ ಹಾಗೂ ಆತನ 3 ವರ್ಷದ ಮಗ ಸಹ ಇದ್ದರು.
ಸಂತೋಷ್ ಸೇನ್ ಬಾಲಕಿಯ ಮೇಲೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾಗ, ಮತ್ತೊಬ್ಬ ಆರೋಪಿ ಜಿತೇಂದ್ರ ರಜಪೂತ್ ತನ್ನ 3 ವರ್ಷದ ಮಗನೊಂದಿಗೆ ಯಾರೂ ಬರದಂತೆ ಕೊಠಡಿಯ ಹೊರಗೆ ಕಾವಲು ಕಾಯುತ್ತಿದ್ದ ಎಂದು ತಿಳಿದುಬಂದಿದೆ.
ಪೊಲೀಸ್ ದೂರು ಮತ್ತು ಬಂಧನ: ಕೃತ್ಯದ ನಂತರ ಆರೋಪಿಗಳು ಬಾಲಕಿಯನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದರು. ಮನೆಗೆ ಹಿಂತಿರುಗಿದ ಬಾಲಕಿ ಪೋಷಕರಿಗೆ ನಡೆದ ಘಟನೆಯನ್ನು ತಿಳಿಸಿದ್ದು, ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























