10:41 PM Thursday 16 - October 2025

20 ದಿನಗಳಿಗೊಮ್ಮೆ “ವರದಕ್ಷಿಣೆ ತಾ” ಎನ್ನುತ್ತಿದ್ದವರು ಕೊನೆಗೆ ಕೊಂದೇ ಬಿಟ್ಟರೇ?

17/03/2021

ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯೋರ್ವಳ ಮೃತದೇಹ ಪತ್ತೆಯಾಗಿದ್ದು, ಪತಿ ಹಾಗೂ ಕುಟುಂಬಸ್ಥರು ಹತ್ಯೆ ಮಾಡಿ, ನೇಣಿಗೆ ಹಾಕಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಯುವತಿಯ ಕುಟುಂಬಸ್ಥರು ಕೂಡ ಇದೊಂದು ಕೊಲೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಮೂರು ತಿಂಗಳ ಹಿಂದೆ ಕೋಲಾರ ಬಳಿಯ ಕ್ಯಾಲನೂರು ಗ್ರಾಮದ ಇಜಾರ್ ನ್ನು ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಗ್ರಾಮದ ಶಾಬುದ್ದಿನ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು.  ಮದುವೆಯ ಸಂದರ್ಭದಲ್ಲಿ ಬುಲೆಟ್ ಗಾಡಿ ತೆಗೆದುಕೊಡುವಂತೆ  ಶಾಬುದ್ದೀನ್ ಒತ್ತಾಯಿಸಿದ್ದ. ಆತನ ಬೇಡಿಕೆಯಂತೆ ವಧುವಿನ ಮನೆಯವರು ಆತನಿಗೆ ಬುಲೆಟ್ ನೀಡಿದ್ದರು. ಬಳಿಕ ವರನ ಕಾರಿನ ಕಂತು 3 ಲಕ್ಷ ರೂಪಾಯಿಯನ್ನು ಕೂಡ ಕಟ್ಟಲು ಹಣ ತೆಗೆದುಕೊಳ್ಳಲಾಗಿತ್ತು.

ಇಷ್ಟೆಲ್ಲ ವಧುವಿನ ಕಡೆಯವರು ನೀಡಿದ್ದರು ಕೂಡ ಶಾಬುದ್ದೀನ್ ಹಾಗೂ ಕುಟುಂಬಸ್ಥರು ಇನ್ನಷ್ಟು ಹಣವನ್ನು ವರದಕ್ಷಿಣೆಯಾಗಿ ತರುವಂತೆ ವಧುವಿಗೆ ನಿರಂತರವಾಗಿ ಕಿರುಕುಳ ನಿಡುತ್ತಿದ್ದರು ಎಂದು ಹೇಳಲಾಗಿದೆ. 20 ದಿನಗಳಿಗೊಮ್ಮೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಶಾಬುದ್ದೀನ್ ಹಾಗೂ ಕುಟುಂಬಸ್ಥರು ಇಜಾರ್ ಳನ್ನು ಪೀಡಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮಾರ್ಚ್ 16ರಂದು ವರನ ಕಡೆಯವರು ವಧುವಿನ ಮನೆಗೆ ಕರೆ ಮಾಡಿ, ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಅಲ್ಲಿಗೆ ಹೋಗಿ ನೋಡಿದರೆ, ಇಜಾರ್ ಳ ಮೈಯಿಡೀ ಗಾಯವಾಗಿತ್ತು ಎಂದು ಪೋಷಕರು ಹೇಳಿದ್ದು, ಆಕೆಗೆ ಥಳಿಸಿ ಚಿತ್ರ ಹಿಂಸೆ ನೀಡಿ ಬಳಿಕ ನೇತುಹಾಕಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಘಟನೆ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಈ ಪ್ರಕರಣದ ಸತ್ಯಾಸತ್ಯತೆಗಳ ಬಳಿಕ ಪೊಲೀಸರು ಸ್ಪಷ್ಟ ಹೇಳಿಕೆ ನೀಡುವ ಸಾಧ್ಯತೆ ಇದೆ.

ಇತ್ತೀಚಿನ ಸುದ್ದಿ

Exit mobile version