ಕನ್ನಡಿಗರಿಗೆ ಬೀರು–ತಮಿಳುನಾಡಿಗೆ ನೀರು: ಮಹಿಳೆಯರಿಂದ ಸರ್ಕಾರದ ಅಣಕು ಶವಯಾತ್ರೆ!!

protest
09/10/2023

ಚಾಮರಾಜನಗರ: ರಾಜ್ಯ ಸರ್ಕಾರ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಇಂದು ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದರು.

ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿ  ಖಾಲಿ ಮದ್ಯದ ಬಾಟಲಿಗಳ ಜೊತೆ ಅಣಕು ಶವಯಾತ್ರೆ ನಡೆಸಿ ಸಿಎಂ‌ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಆರಂಭದಲ್ಲಿ ಪೊಲೀಸರು ಅಣಕು ಶವಯಾತ್ರೆಗೆ ಅವಕಾಶ ಕೊಡದ ಹಿನ್ನೆಲೆ ಆಕ್ರೋಶಗೊಂಡ ಮಹಿಳಾ ಕಾರ್ಯಕರ್ತರು ಪಟ್ಟು ಬಿಡದೇ ಅಣಕು ಶವಯಾತ್ರೆ ನಡೆಸಿದರು.

ಸಂತೇಮರಹಳ್ಳಿ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಶವಯಾತ್ರೆ ನಡೆಸಿ- ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ವಿರುದ್ದ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ಕನ್ನಡಿಗರಿಗೆ ಬೀರು-ತಮಿಳುನಾಡಿಗೆ ನೀರು ಕೊಟ್ಟ ಸರ್ಕಾರ ಎಂದು ಘೋಷಣೆಗಳನ್ನು ಕೂಗಿದರು.

ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಮೀ ಗಟ್ಟಲೇ ವಾಹನಗಳು ನಿಂತು ಸಂಚಾರ ಅಸ್ತವ್ಯಸ್ತವಾಗಿತ್ತು. ಮಹಿಳಾ ಮೋರ್ಚಾ  ಪ್ರತಿಭಟನೆಗೆ ಮಾಜಿ ಶಾಸಕ ಎನ್.ಮಹೇಶ್ ಸಾಥ್ ಕೊಟ್ಟರು.

ಇತ್ತೀಚಿನ ಸುದ್ದಿ

Exit mobile version