ಹನಿಮೂನ್ ಗೆ ಅಯೋಧ್ಯೆಗೆ ಕರೆದೊಯ್ದ ಪತಿಗೆ ಡಿವೋರ್ಸ್ ನೀಡಿದ ಪತ್ನಿ!

ಬೋಫಾಲ್: ಪತ್ನಿಯನ್ನು ಹನಿಮೂನ್ ಗೆ ಕರೆದೊಯ್ಯುವುದಾಗಿ ಹೇಳಿ ಅಯೋಧ್ಯೆಗೆ ಕರೆದೊಯ್ದ ಪತಿಯ ವಿರುದ್ಧ ಮಧ್ಯಪ್ರದೇಶದ ಮಹಿಳೆಯೊಬ್ಬರು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು, ಪತಿಯಿಂದ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಐದು ತಿಂಗಳ ಹಿಂದೆ ಮಧ್ಯಪ್ರದೇಶದ ಮಹಿಳೆ ವಿವಾಹವಾಗಿದ್ದರು. ವಿವಾಹದ ಬಳಿಕ ಹನಿಮೂನ್ ಗಾಗಿ ವಿದೇಶಕ್ಕೆ ಹೋಗಲು ಅವರು ಬಯಸಿದ್ದರು. ಆದರೆ ಪತಿ ವಿದೇಶಕ್ಕೆ ಹನಿಮೂನ್ ಗೆ ಕರೆದೊಯ್ಯಲು ನಿರಾಕರಿಸಿದ್ದು, ಭಾರತದಲ್ಲಿಯೇ ಯಾವುದಾದರೂ ಪ್ರದೇಶಕ್ಕೆ ಹನಿಮೂನ್ ಗೆ ಹೋಗೋಣ ಎಂದಿದ್ದಾನೆ. ಅಂತಿಮವಾಗಿ ಗೋವಾ ಅಥವಾ ದಕ್ಷಿಣ ಭಾರತಕ್ಕೆ ಭೇಟಿ ನೀಡೋಣ ಅಂತ ತೀರ್ಮಾನಕ್ಕೆ ಬಂದಿದ್ದಾರೆ.
ಗೋವಾ ಪ್ರವಾಸಕ್ಕೆಂದು ಪತ್ನಿಯನ್ನು ಕರೆತಂದಿದ್ದ ಪತಿ, ಆಕೆಗೆ ಏನೂ ಹೇಳದೇ ನೇರವಾಗಿ ಅಯೋಧ್ಯೆಯಲ್ಲಿ ಇಳಿದಿದ್ದಾನೆ. ಈ ವೇಳೆ ಪತ್ನಿ ವಿಚಾರಿಸಿದಾಗ ತಾಯಿ ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಗೂ ಮೊದಲು ಅಯೋಧ್ಯೆಗೆ ಹೋಗಲು ಹೇಳಿರೋದರಿಂದ ಬಂದಿರೋದಾಗಿ ಹೇಳಿದ್ದಾನೆ.
ಅಂದು ಅಲ್ಲಿ ಪತ್ನಿ ಯಾವುದೇ ತಕರಾರು ನಡೆಸಲಿಲ್ಲ, ಯಾತ್ರೆ ಮುಗಿಸಿ ಊರಿಗೆ ತೆರಳಿ 10 ದಿನವಾದ ನಂತರ ಅಂದರೆ, ಜನವರಿ 19ರಂದು ಪತಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಪತಿಗೆ ಯಾವುದೇ ಹಣಕಾಸಿನ ಅಡಚಣೆ ಇಲ್ಲ, ಆದರೂ ವಿದೇಶ ಪ್ರವಾಸಕ್ಕೆ ಒಪ್ಪಿಕೊಂಡಿಲ್ಲ, ಭಾರತದಲ್ಲೇ ಗೋವಾ ಅಥವಾ ದಕ್ಷಿಣ ಭಾರತಕ್ಕೆ ಭೇಟಿ ನೀಡಲು ಒಪ್ಪಿಕೊಂಡಿದ್ದರು. ಆದರೆ ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಬುಕ್ ಮಾಡಿದ್ದರು ಎಂದು ಪತ್ನಿ ಹೇಳಿದ್ದಾರೆ. ಸದ್ಯ ಈ ಕೇಸ್ ಸಂಬಂಧ ಭೋಪಾಲ್ ನ ಕೌಟುಂಬಿಕ ನ್ಯಾಯಾಲಯದಲ್ಲಿ ಕೌನ್ಸೆಲಿಂಗ್ ನಡೆಯುತ್ತಿದೆ ಎಂದು ವಕೀಲ ಶೈಲ್ ಅವಸ್ತಿ ಹೇಳಿದ್ದಾರೆ.