ಕಾಫಿನಾಡಲ್ಲಿ ಮುಂದುವರಿದ ಕಾಡಾನೆ ಅಟ್ಟಹಾಸ: ಈ ಬಾರಿ ಬಡ ರೈತನ ಹಸು ಬಲಿ!

elephant
09/03/2026

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಮಿತಿಮೀರುತ್ತಿದ್ದು, ಕಾಫಿನಾಡಿನ ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇತ್ತೀಚಿನ ಘಟನೆಯಲ್ಲಿ ಕಾಡಾನೆಯೊಂದು ಹಸುವನ್ನು ತುಳಿದು ಸಾಯಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಣಿಮಕ್ಕಿ ಗ್ರಾಮದಲ್ಲಿ ನಡೆದಿದೆ.

ಮಾಣಿಮಕ್ಕಿ ಗ್ರಾಮದ ನಿವಾಸಿ ಮಧು ಎಂಬುವವರಿಗೆ ಸೇರಿದ ಹಾಲು ಕೊಡುವ ಹಸು ಕಾಡಾನೆ ದಾಳಿಗೆ ಬಲಿಯಾಗಿದೆ. ಕಾಡಂಚಿನ ಗ್ರಾಮವಾದ ಮಾಣಿಮಕ್ಕಿಯಲ್ಲಿ ಹಸು ಮೇಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದ ಕಾಡಾನೆ, ಹಸುವನ್ನು ತುಳಿದು ಕೊಂದಿದೆ. ಮಧು ಅವರು ಕೇವಲ ಕೃಷಿಯನ್ನಷ್ಟೇ ನಂಬದೆ, ಹೈನುಗಾರಿಕೆಯ ಮೂಲಕ ಜೀವನೋಪಾಯ ಕಂಡುಕೊಂಡಿದ್ದರು. ಇದೀಗ ಮನೆಯ ಮಹಾಲಕ್ಷ್ಮಿಯಂತಿದ್ದ ಹಸುವನ್ನು ಕಳೆದುಕೊಂಡು ರೈತ ಮಧು ಕಣ್ಣೀರು ಹಾಕುತ್ತಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ:

ಘಟನಾ ಸ್ಥಳಕ್ಕೆ ಪಶುವೈದ್ಯರು ಭೇಟಿ ನೀಡಿ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಆಲ್ದೂರು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಮನುಷ್ಯರು ಮತ್ತು ಜಾನುವಾರುಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ಸುತ್ತಮುತ್ತಲಿನ ಗ್ರಾಮಸ್ಥರು ತೋಟಗಳಿಗೆ ಕೆಲಸಕ್ಕೆ ಹೋಗಲು ಮತ್ತು ಜಾನುವಾರುಗಳನ್ನು ಮೇಯಿಸಲು ಭಯಪಡುತ್ತಿದ್ದಾರೆ.

“ಪ್ರತಿ ಬಾರಿ ಘಟನೆ ನಡೆದಾಗಲೂ ಅಧಿಕಾರಿಗಳು ಬಂದು ಹೋಗುತ್ತಾರೆ, ಆದರೆ ನಮಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆ ಹಾವಳಿಗೆ ಕೂಡಲೇ ಶಾಶ್ವತ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version