11:45 PM Friday 19 - December 2025

ಮಹಾರಾಷ್ಟ್ರದಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್ ವಿಚಾರವಾಗಿ ನಡೆಯಿತು ಘರ್ಷಣೆ: ಇಬ್ಬರು ಸಾವು, 10 ಮಂದಿಗೆ ಗಾಯ

11/09/2023

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಭುಗಿಲೆದ್ದ ಕೋಮು ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ನಿಂದಾಗಿ ಘರ್ಷಣೆ ಭುಗಿಲೆದ್ದಿತು.

ಮೃತರನ್ನು ಹಸನ್ ಶಿಕಲ್ಗಾರ್ (30) ಮತ್ತು ಸಮೀರ್ ಬಾಗವಾನ್ (53) ಎಂದು ಗುರುತಿಸಲಾಗಿದೆ. ಪೋಸ್ಟ್ ಅಪ್ಲೋಡ್ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಪುಸೆಸಾವಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಜಿಲ್ಲೆಯಲ್ಲಿ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ವದಂತಿಗಳು ಹರಡುವುದನ್ನು ತಡೆಗಟ್ಟಲು, ಮತ್ತಷ್ಟು ಘರ್ಷಣೆಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು.

ಪೊಲೀಸ್ ಅಧೀಕ್ಷಕರು ಮತ್ತು ಇನ್ಸ್ ಲೆಕ್ಟರ್ ಜನರಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದರು. ಕೊಲ್ಹಾಪುರ ವಲಯ ಇನ್ಸ್ ಪೆಕ್ಟರ್ ಜನರಲ್ (ಐಜಿ) ಸುನಿಲ್ ಫುಲಾರಿ ಮಾತನಾಡಿ, “ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್‌ನಲ್ಲಿ ಕೆಲವು ಆಕ್ಷೇಪಾರ್ಹ ಪೋಸ್ಟ್ ಗಳನ್ನು ಪ್ರದರ್ಶಿಸಲಾಗಿತ್ತು.‌‌

ಈ ಸಂಬಂಧ ಪೊಲೀಸರು ಗ್ರಾಮದ ಹೊರಠಾಣೆಯಲ್ಲಿ ಯುವಕನನ್ನು ತನಿಖೆ ಮಾಡಿದ್ದಾರೆ. ಆ ಸಮಯದಲ್ಲಿ ಮತ್ತೊಂದು ಸಮುದಾಯದ ಕೆಲವು ವ್ಯಕ್ತಿಗಳು ಪೊಲೀಸ್ ಠಾಣೆಯ ಹೊರಗೆ ಗಲಾಟೆ ಮಾಡಿದ್ದಾರೆ ಅಂದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಗಲಭೆಗೆ ಸಂಬಂಧಿಸಿದವುಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 23 ಜನರನ್ನು ಬಂಧಿಸಲಾಗಿದೆ.

ಆಕ್ಷೇಪಾರ್ಹ ಪೋಸ್ಟ್ ಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶವನ್ನು ಹೊಂದಿರುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಐಜಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version