ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ 7.7 ತೀವ್ರತೆಯ ಭೂಕಂಪ

28/03/2025

ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ 7.7 ತೀವ್ರತೆಯ ಭೂಕಂಪ ಶುಕ್ರವಾರ ಸಂಭವಿಸಿದ್ದು, 30 ಅಂತಸ್ತಿನ ಎತ್ತರದ ಕಟ್ಟಡ ಕುಸಿದಿದೆ. ಅದರಡಿಯಲ್ಲಿ 40ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ. ಈ ಘಟನೆಯ ಬೆನ್ನಲ್ಲೇ ಭಾರತದ ಕೋಲ್ಕತ್ತ ಮತ್ತು ಇಂಫಾಲ್‌ನಲ್ಲೂ ಕಂಪನದ ಅನುಭವವಾಗಿದೆ ಎಂದು ಅಲ್ಲಿನ ಜನರು ಹೇಳಿದ್ದಾರೆ.

ಭೂಕಂಪದ ತೀವ್ರತೆಗೆ ಬ್ಯಾಂಕಾಕ್‌ನ ಬಹುಮಹಡಿ ಕಟ್ಟಡವು ಧರೆಗುರುಳಿ ಧೂಳು ಎಬ್ಬಿಸಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಜನರ ಚೀರಾಟ, ಸುರಕ್ಷಿತ ಸ್ಥಳ ಅರಸಿ ಓಡುತ್ತಿರುವ ದೃಶ್ಯ ಹೃದಯ ಕಲಕುವಂತಿತ್ತು.

ಥಾಯ್ಲೆಂಡ್‌ನಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತರಲಾಗಿದೆ ಎಂದು ಅಲ್ಲಿಯ ಪ್ರಧಾನಿ ಪೀತಾಂಗ್‌ತ್ರನ್‌ ಶಿನ್ವಾತ್ರಾ ಹೇಳಿದ್ದಾರೆ.

ಮ್ಯಾನ್ಮಾರ್‌ನ ಮಂಡಲೆ ನಗರದ ಬಳಿ 10 ಕಿ.ಮೀ ಆಳದಲ್ಲಿ ಕೇಂದ್ರಬಿಂದು ದಾಖಲಾಗಿದೆ. ಭೂಕಂಪವು ರಿಕ್ಟರ್‌ ಮಾಪನದಲ್ಲಿ 7.7 ತೀವ್ರತೆಯದ್ದಾಗಿತ್ತು. ನಿರ್ಮಾಣ ಹಂತದ ಕಟ್ಟಡ ಕೆಲವೇ ಸೆಕೆಂಡುಗಳಲ್ಲಿ ನೆಲಸಮಗೊಂಡಿತು.
ಮಂಡಲೆ ಬಳಿ 90 ವರ್ಷ ಹಳೆಯ ಸೇತುವೆ ಕುಸಿದಿದೆ. ಇದು ಮಂಡಲೆ ಮತ್ತು ಮ್ಯಾನ್ಮಾರ್‌ನ ಪ್ರಮುಖ ನಗರ ಯಾನ್ಗಾಂಗ್‌ಗೆ ಸಂಪರ್ಕ ಕಲ್ಪಿಸುತ್ತಿತ್ತು.

ಬ್ಯಾಂಕಾಕ್‌ನ ಚತುಚಕ್‌ ಮಾರುಕಟ್ಟೆ ಪ್ರದೇಶದಲ್ಲಿ ಕಟ್ಟಡ ಕುಸಿತ ಸಂಭವಿಸಿದ ದುರ್ಘಟನೆಯಲ್ಲಿ ಎಷ್ಟು ಕಾರ್ಮಿಕರು ಸಿಲುಕಿದ್ದಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮ್ಯಾನ್ಮಾರ್‌ನ ರಾಜಧಾನಿ ನಾಯ್ಪಯಿತಾದಲ್ಲಿ ಹಲವು ಮನೆಗಳು ನೆಲಸಮಗೊಂಡಿವೆ ಎಂದು ವರದಿಯಾಗಿದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿನ ಭೂಕಂಪನದ ತೀವ್ರತೆಯ ಅನುಭವ ಭಾರತದ ಕೋಲ್ಕತ್ತ ಮತ್ತು ಇಂಫಾಲ್‌ನಲ್ಲೂ ಆಗಿದೆ. ಮೇಘಾಲಯದ ಪೂರ್ವ ಗರೊ ಪರ್ವತ ಶ್ರೇಣಿಯಲ್ಲಿ ಕಂಪನದ ಅನುಭವವಾಗಿದೆ.

ಮಣಿಪುರದಲ್ಲೂ ಭೂಕಂಪದ ಅನುಭವವಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಯಾವುದೇ ಹಾನಿಯ ಕುರಿತು ವರದಿಯಾಗಿಲ್ಲ.

ಮ್ಯಾನ್ಮಾರ್‌ ಮತ್ತು ಥಾಯ್ಲೆಂಡ್‌ನ ಬೆನ್ನಲ್ಲೇ ಬಾಂಗ್ಲಾದೇಶದಲ್ಲೂ 7.3 ತೀವ್ರತೆಯ ಭೂಕಂಪ ಸಂಭವಿಸಿದೆ. ಢಾಕಾ ಮತ್ತು ಚತ್ತೋಗ್ರಾಮ್‌ನಲ್ಲಿ ಸಂಭವಿಸಿದ ಈ ಭೂಕಂಪದಲ್ಲಿ ಯಾವುದೇ ಹಾನಿಯಾದ ಕುರಿತು ವರದಿಯಾಗಿಲ್ಲ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version