12:58 PM Wednesday 20 - August 2025

ಧನುಷ್‌ ನನ್ನ ಪುತ್ರ ಎಂದು ಹೇಳಿಕೊಂಡಿದ್ದ ಕದಿರೇಶನ್‌ ನಿಧನ

dhanush
14/04/2024

ಕಾಲಿವುಡ್‌ ನಟ ಧನುಷ್‌ ತಮ್ಮ ಪುತ್ರ ಎಂದು ತಮಿಳುನಾಡಿನ ವೃದ್ಧ ದಂಪತಿ ಕಳೆದ ಕೆಲ ವರ್ಷಗಳಿಂದ ಹೇಳಿಕೊಳ್ಳುತ್ತಲೇ ಬಂದಿತ್ತು. ತಮಿಳು ಸಿನಿಮಾ ಇಂಡಸ್ಟ್ರಿಯಲ್ಲೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಒಂದು ಹೆಜ್ಜೆ ಮುಂದೆ ಹೋಗಿ, ಕೋರ್ಟ್‌ ಮೆಟ್ಟಿಲೇರಿ, ನನ್ನ ಮಗನನ್ನು ನಮಗೆ ಮರಳಿಸಿ ಎಂದಿದ್ದರು ಕದಿರೇಶನ್‌ ಮತ್ತು ಮೀನಾಕ್ಷಿ ದಂಪತಿ. ಈಗ ಧನುಷ್ ತಂದೆ ಎಂದು ಹೇಳಿಕೊಂಡಿದ್ದ ಕದಿರೇಶನ್ ನಿಧನರಾಗಿದ್ದಾರೆ. 70ನೇ ವಯಸ್ಸಿನಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಧುರೈ ಮೂಲದ ಕದಿರೇಶನ್‌ ಸ್ಥಳೀಯ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಯೋ ಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಕದಿರೇಶನ್ ಮತ್ತು ಮೀನಾಕ್ಷಿ ಮಧುರೈನ ಮೇಲೂರು ತಾಲೂಕಿನ ಮಲಂಪಟ್ಟಿ ಗ್ರಾಮದ ನಿವಾಸಿಗಳು. ಧನುಷ್ ತಮಗೆ ಹುಟ್ಟಿದ ಮೂರನೇ ಮಗ ಈ ದಂಪತಿ ಸುದೀರ್ಘ ಕಾನೂನು ಸಮರವನ್ನೇ ನಡೆಸಿತ್ತು. ಆದರೆ, ನಿರ್ದೇಶಕ ಕಸ್ತೂರಿ ರಾಜ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ಈ ಧನುಷ್ ಎಂಬುದು ಬಹುತೇಕರಿಗೆ ತಿಳಿದ ವಿಚಾರ.

ಧನುಷ್‌ ನನ್ನ ಮಗ ಎಂದಿದ್ದ ಕದಿರೇಶನ್:

11ನೇ ತರಗತಿಯಲ್ಲಿ ಓದಲು ಮನೆ ತೊರೆದ ಮಗ ಮರಳಿ ಮನೆಗೆ ಬಾರಲಿಲ್ಲ. ಕಸ್ತೂರಿ ರಾಜ ಮನೆಯ ದತ್ತು ಮಗನಾದ. ಆ ಮಗನೇ ಈಗಿನ ಧನುಷ್‌ ಎಂದು ಕದಿರೇಶನ್ ಮತ್ತು ಅವರ ಪತ್ನಿ ಮೀನಾಕ್ಷಿ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದರು.

ಅಷ್ಟೇ ಅಲ್ಲ ಧನುಷ್‌ ಕಡೆಯಿಂದ ತಿಂಗಳಿಗೆ 65,000 ರೂಪಾಯಿ ಪರಿಹಾರ ನೀಡುವಂತೆಯೂ ಈ ದಂಪತಿ ಕೋರ್ಟ್‌ನಲ್ಲಿ ಕೇಳಿಕೊಂಡಿದ್ದರು. ಧನುಷ್ ಸಹ ಈ ಸಂಬಂಧ ವಕೀಲರನ್ನು ನಿಯೋಜಿಸಿದ್ದರು. ಅವರಿಂದ ನೋಟೀಸ್‌ ಸಹ ರವಾನೆಯಾಗಿತ್ತು. ಹೀಗೆ ಮುಂದುವರಿದು, ಮಧುರೈ ಮೇಲೂರು ನ್ಯಾಯಾಲಯದಲ್ಲಿ ದಂಪತಿ ಸಲ್ಲಿಸಿದ್ದ ಪ್ರಕರಣವನ್ನು ಚೆನ್ನೈ ಹೈಕೋರ್ಟ್ ವಜಾಗೊಳಿಸಿತ್ತು.‌

ಸುಪ್ರೀಂ ಕೋರ್ಟ್‌ ಮೊರೆಗೆ ಮುಂದಾಗಿದ್ದ ದಂಪತಿ:

ಕಳೆದ ಕೆಲವು ತಿಂಗಳುಗಳಿಂದ ಮಧುರೈ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಮಾರ್ಚ್ 14 ರಂದು ಹೈಕೋರ್ಟ್ ತೀರ್ಪು ನೀಡಿತ್ತು. ಅರ್ಜಿದಾರರು ದುರುದ್ದೇಶದಿಂದ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಮತ್ತು ಆರೋಪಗಳನ್ನು ಸಾಬೀತುಪಡಿಸಲು ಸರಿಯಾದ ಸಾಕ್ಷ್ಯವನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ತೀರ್ಪು ನೀಡಿತ್ತು. ಈ ತೀರ್ಪಿಗೆ ಬಗ್ಗದ ಕದಿರೇಶನ್‌ ಮತ್ತು ಮೀನಾಕ್ಷಿ, ಈ ಕೇಸ್‌ನಿಂದ ನಾವು ಹಿಂದೆ ಸರಿಯುವುದಿಲ್ಲ. ಸುಪ್ರೀಂ ಕೋರ್ಟ್‌ನ ಮೊರೆ ಹೋಗುತ್ತೇವೆ ಎಂದೂ ಹೇಳಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version