ಭಾರಿ ಗಾಳಿ–ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ; ಮೂಡಿಗೆರೆಯಲ್ಲಿ ಮನೆ ಸಂಪೂರ್ಣ ಜಖಂ
ಮೂಡಿಗೆರೆ: ತಾಲೂಕಿನ ಬೆಟ್ಟಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಮಳೆಗೆ ಅನಾಹುತವೊಂದು ಸಂಭವಿಸಿದೆ. ಕೋಳೂರು ಗ್ರಾಮದ ಬಡವನಡಿಣ್ಣೆ ನಿವಾಸಿಯಾದ, ಪರಿಶಿಷ್ಟ ಜಾತಿಗೆ ಸೇರಿದ ಜಾನಕಿ ಕೋಂ ಸಿದ್ಧಪ್ಪ ಎಂಬುವವರ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ, ಇಡೀ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ.
ಕಳೆದ ರಾತ್ರಿ ತಾಲೂಕಿನಾದ್ಯಂತ ಭಾರಿ ಗಾಳಿ-ಮಳೆ ಸುರಿದಿದ್ದು, ಈ ವೇಳೆ ಜಾನಕಿ ಅವರ ಮನೆ ಮೇಲೆ ಮರ ಮುರಿದು ಬಿದ್ದಿದೆ. ಪರಿಣಾಮ ಮನೆಯ ಮೇಲ್ಛಾವಣಿ ಹಾಗೂ ಗೋಡೆಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಘಟನೆ ನಡೆದ ಸಂದರ್ಭದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಬೆಟ್ಟಗೆರೆ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮರ ಬಿದ್ದಿದ್ದರಿಂದ ಆಗಿರುವ ನಷ್ಟದ ಬಗ್ಗೆ ಮೌಲ್ಯಮಾಪನ ಕಾರ್ಯವನ್ನು ಅಧಿಕಾರಿಗಳು ತಕ್ಷಣವೇ ಕೈಗೊಂಡಿದ್ದಾರೆ.
ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ತುರ್ತು ನೆರವು ಹಾಗೂ ಸೂಕ್ತ ಪರಿಹಾರವನ್ನು ಆದಷ್ಟು ಬೇಗ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























