ರಕ್ಷಣಾ ಕವಚವಿಲ್ಲದೇ ಗಗನಚುಂಬಿ ಕಟ್ಟಡ ಏರಿ ಪ್ರಪೋಸ್ ಮಾಡಿದ ಜೋಡಿ: ಕೆಳಗಿಳಿಯುತ್ತಿದ್ದಂತೆಯೇ ಆರೆಸ್ಟ್ ಮಾಡಿದ ಪೊಲೀಸರು

Empire State Building.jpg
02/07/2026

ನ್ಯೂಯಾರ್ಕ್: ಪ್ರೇಮಿಗಳು ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಲು ಏನೇನೋ ಸಾಹಸಗಳನ್ನು ಮಾಡುತ್ತಾರೆ. ಆದರೆ ನ್ಯೂಯಾರ್ಕ್ ನ ಪ್ರಸಿದ್ಧ ಗಗನಚುಂಬಿ ಕಟ್ಟಡ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ (Empire State Building) ಮೇಲೆ ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೆ ಏರಿ ಪ್ರಪೋಸ್ ಮಾಡಿದ ಜೋಡಿಯೊಂದು ಈಗ ಪೊಲೀಸರ ಅತಿಥಿಯಾಗಿದೆ.

ಬುಧವಾರ ಮಧ್ಯಾಹ್ನ ನ್ಯೂಯಾರ್ಕ್ ನಗರದಲ್ಲಿ ಈ ರೋಮಾಂಚನಕಾರಿ ಹಾಗೂ ಅಪಾಯಕಾರಿ ಘಟನೆ ನಡೆದಿದೆ. ಇವಾನ್ ಕುಜ್ನೆತ್ಸೊವ್ (32) ಮತ್ತು ಏಂಜಲೀನಾ ನಿಕೋಲಾವ್ (33) ಎಂಬುವವರೇ ಬಂಧಿತ ಪ್ರೇಮಿಗಳು. ಇವರಿಬ್ಬರು ಯಾವುದೇ ಹಗ್ಗ ಅಥವಾ ರಕ್ಷಣಾ ಕವಚಗಳಿಲ್ಲದೆ ಕಟ್ಟಡದ ಅತ್ಯಂತ ಎತ್ತರದ ಗೋಪುರವನ್ನು (Spire) ಏರಿದ್ದಾರೆ.

ಮುಖಕ್ಕೆ ಮಾಸ್ಕ್ ಧರಿಸಿದ್ದ ಈ ಜೋಡಿ, ಎಂಪೈರ್ ಸ್ಟೇಟ್ ಕಟ್ಟಡದ 103ನೇ ಮಹಡಿಯಲ್ಲಿರುವ ವಾಟರ್ ಟವರ್ ನಿರ್ವಹಣಾ ಹ್ಯಾಚ್ (ರಹಸ್ಯ ಬಾಗಿಲು) ಮೂಲಕ ಕಟ್ಟಡದ ತುತ್ತತುದಿಯನ್ನು ತಲುಪಿದ್ದಾರೆ ಎನ್ನಲಾಗಿದೆ. ಅಲ್ಲಿ ತಲುಪಿದ ಬಳಿಕ, ಇಬ್ಬರೂ ಕಟ್ಟಡದ ತುದಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ದೊಡ್ಡದೊಂದು ಬ್ಯಾನರ್ ಪ್ರದರ್ಶಿಸಿದ್ದಾರೆ. ಆ ಬ್ಯಾನರ್ ನಲ್ಲಿ ಅಮೆರಿಕದ ಪ್ರಸಿದ್ಧ ಗಿಟಾರ್ ವಾದಕ ಜಿಮಿ ಹೆಂಡ್ರಿಕ್ಸ್ ಅವರ ಪ್ರಸಿದ್ಧ ಸಾಲಾದ “ಯಾವಾಗ ಪ್ರೀತಿಯ ಶಕ್ತಿಯು, ಅಧಿಕಾರದ ಮೇಲಿನ ಪ್ರೀತಿಯನ್ನು ಸೋಲಿಸುತ್ತದೆಯೋ, ಆಗ ಜಗತ್ತಿಗೆ ಶಾಂತಿ ಸಿಗುತ್ತದೆ” ಎಂದು ಬರೆಯಲಾಗಿತ್ತು.

ಇದೇ ವೇಳೆ ಇಬ್ಬರ ನಡುವೆ ಪ್ರೇಮ ನಿವೇದನೆ (Proposal) ಮತ್ತು ನಿಶ್ಚಿತಾರ್ಥ ನಡೆದಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಕಟ್ಟಡದ ಮೇಲಿಂದ ಕೆಳಗಿಳಿಯುತ್ತಿದ್ದಂತೆ ನ್ಯೂಯಾರ್ಕ್ ಪೊಲೀಸರು (NYPD) ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಬಂಧಿತ ಜೋಡಿಯ ವಿರುದ್ಧ ಅಕ್ರಮ ಪ್ರವೇಶ (Burglary), ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವುದು (Reckless Endangerment), ಕ್ರಿಮಿನಲ್ ಕಿಡಿಗೇಡಿತನ, ಸ್ಥಳೀಯ ನಿಯಮಗಳ ಉಲ್ಲಂಘನೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ವಿಶೇಷವೆಂದರೆ, ಇವರಿಬ್ಬರೂ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ವಿಶ್ವದ ದೊಡ್ಡ ದೊಡ್ಡ ಕಟ್ಟಡಗಳನ್ನು ಏರುವ ‘ರೂಫ್ಟಾಪಿಂಗ್’ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಆದರೆ ಈ ಬಾರಿ ಕಾನೂನು ಬಾಹಿರವಾಗಿ ಗಗನಚುಂಬಿ ಕಟ್ಟಡ ಏರಿದ್ದಕ್ಕೆ ಜೈಲು ಪಾಲಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

 

ಇತ್ತೀಚಿನ ಸುದ್ದಿ

Exit mobile version