ಸಿಗ್ನಲ್ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದವರಿಗೆ ರೈಲು ಡಿಕ್ಕಿ: ಮೂವರು ಉದ್ಯೋಗಿಗಳು ಸ್ಥಳದಲ್ಲೇ ಸಾವು
ಮುಂಬೈ: ಪಶ್ಚಿಮ ರೈಲ್ವೇಯಲ್ಲಿ ಸಿಗ್ನಲ್ ಲೈನ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಉದ್ಯೋಗಳಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದಿದೆ.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ವಸಾಯಿ ಪ್ರದೇಶ ಪಾಲ್ಘರ್ ಬಳಿ ಈ ಘಟನೆ ನಡೆದಿದೆ. ಮೃತರನ್ನು ಮುಖ್ಯ ಸಿಗ್ನಲಿಂಗ್ ಇನ್ಸ್ಪೆಕ್ಟರ್ (ಭಯಂದರ್) ವಾಸು ಮಿತ್ರ, ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಾಹಕ (ವಸಾಯಿ ರಸ್ತೆ) ಸೋಮನಾಥ ಉತ್ತಮ್ ಲಂಬುಟ್ರೆ ಮತ್ತು ಸಹಾಯಕ ಸಚಿನ್ ವಾಂಖಡೆ ಎಂದು ಗುರುತಿಸಲಾಗಿದೆ.
ತಾಂತ್ರಿಕ ದೋಷಗಳಿಂದ ಸ್ಥಗಿತಗೊಂಡಿದ್ದ ವಸಾಯಿ ರಸ್ತೆ ಮತ್ತು ನೈಗಾಂವ್ ನಿಲ್ದಾಣಗಳ ನಡುವಿನ ಸಿಗ್ನಲಿಂಗ್ ಪಾಯಿಂಟ್ ಸರಿಪಡಿಸುತ್ತಿದ ವೇಳೆ ಈ ಘಟನೆ ನಡೆದಿದೆ.
ಮೂವರು ಉದ್ಯೋಗಿಗಳು ಸಮಸ್ಯೆಯನ್ನು ಪರಿಹರಿಸುತ್ತಿದ್ದಂತೆ, ಚರ್ಚ್ ಗೇಟ್ ನಿಲ್ದಾಣದ ಕಡೆಗೆ ಚಲಿಸುತ್ತಿದ್ದ ರೈಲು, ಅವರಿಗೆ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ನೌಕರರ ಕುಟುಂಬಗಳಿಗೆ ಇಲಾಖೆ ಪರಿಹಾರ ಘೋಷಿಸಿದ್ದು, ಮೂವರು ಸಿಗ್ನಲಿಂಗ್ ಪಾಯಿಂಟ್ ನ ದುರಸ್ತಿ ಕಾರ್ಯವನ್ನು ಕೈಗೊಳ್ಳುವ ಮೊದಲು ರೈಲ್ವೆ ನೌಕರರಿಗೆ ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಏಕೆ ಒದಗಿಸಿಲ್ಲ ಎನ್ನುವುದನ್ನು ತನಿಖೆ ನಡೆಸಿ. ಇದರ ಹಿಂದಿನ ಕಾರಣಗಳನ್ನು ಪತ್ತೆಹಚ್ಚುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

























