10:44 AM Thursday 23 - October 2025

ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದವಳು ಮನೆಗೆ ಕರೆದಳು: ಮನೆಗೆ ಹೋದ ಮೇಲೆ ನಡೆದಿದ್ದೇ ಬೇರೆ!

bangalore case
29/07/2025

ಬೆಂಗಳೂರು: ಡೇಟಿಂಗ್ ಆ್ಯಪ್‌ ಮೂಲಕ ಪರಿಚಯ ಮಾಡಿಕೊಂಡು ಉದ್ಯೋಗಿಯೊಬ್ಬನನ್ನು ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿದ್ದಾರೆ.

ಸಂಗೀತಾ ಸಹಾನಿ (36), ಬೀರಬಲ್ ಮಜ್ಜಗಿ(21), ಅಭಿಷೇಕ್ (19), ಶ್ಯಾಮ್ ಸುಂದರ್ ಪಾಂಡೆ (20), ರಾಜು ಮಾನೆ (34) ಹಾಗೂ ಶರಣಬಸಪ್ಪ ಬಾಳಿಗೆರ್ (50) ಬಂಧಿತ ಆರೋಪಿಗಳಾಗಿದ್ದಾರೆ. ತೆಲಂಗಾಣ ಮೂಲದ ರಾಕೇಶ್ ರೆಡ್ಡಿ ನೀಡಿದ ದೂರು ಆಧರಿಸಿ ನಗರದ ವಿವಿಧ ಸ್ಥಳಗಳಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ರಾಕೇಶ್ ರೆಡ್ಡಿ ಅವರು ಮಹದೇವಪುರದಲ್ಲಿ ಇರುವ ಬೋಯಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಂದ ಆರೋಪಿಗಳು 32 ಲಕ್ಷ ಸುಲಿಗೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು. ದೂರುದಾರರಿಗೆ ಡೇಟಿಂಗ್‌ ಆ್ಯಪ್‌ ವೊಂದರ ಮೂಲಕ ತಿಂಗಳ ಹಿಂದೆ ಆರೋಪಿ ಸಂಗೀತಾ ಪರಿಚಯವಾಗಿತ್ತು. ಆಕೆ ತನ್ನನ್ನು ರಾಜಸ್ಥಾನದ ರಾಕಿ ಎಂದು ಪರಿಚಯಿಸಿಕೊಂಡಿದ್ದಳು. ತಾನು ಅವಿವಾಹಿತಳಾಗಿದ್ದು, ಏಳೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಳು. ಇಬ್ಬರೂ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ಜುಲೈ 17ರಂದು ಭೇಟಿಗೆ ಆಹ್ವಾನಿಸಿದ್ದಳು. ಆದರೆ, ದೂರುದಾರರಿಗೆ ಆಕೆಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಮರುದಿನ ಸಂಜೆ 5.30ರ ಸುಮಾರಿಗೆ ಯಲಹಂಕದ ಗ್ಯಾಲರಿಯಾ ಬಾಲ್‌ ನಲ್ಲಿರುವ ಸ್ಟಾರ್ ಬಕ್ಸ್‌ನಲ್ಲಿ ಇಬ್ಬರೂ ಭೇಟಿ ಆಗಿದ್ದರು. ಬಳಿಕ ಇಬ್ಬರೂ ಆಟೊದಲ್ಲಿ ಸಂಗೀತಾಳ ಮನೆಗೆ ತೆರಳಿದ್ದರು. ಮನೆಯಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಉಳಿದ ಆರೋಪಿಗಳು ಆ ಮನೆಗೆ ಪ್ರವೇಶಿಸಿದ್ದರು. ನಾವು ಮನೆಯ ಮಾಲೀಕರು. ಮನೆಯಲ್ಲಿ ಮದ್ಯಪಾನ ಮಾಡುವಂತಿಲ್ಲ ಎನ್ನುತ್ತಾ ಸಂಗೀತಾ ಹಾಗೂ ದೂರುದಾರರ ಬ್ಯಾಗ್‌ ಗಳನ್ನು ಪರಿಶೀಲಿಸಲು ಮುಂದಾಗಿದ್ದರು. ಆಗ ಬ್ಯಾಗ್‌ ನಲ್ಲಿ ಬಿಳಿ ಬಣ್ಣದ ಪೌಡರ್ ಸಿಕ್ಕಿತ್ತು. ಆ ಪೌಡರ್ ಅನ್ನು ಡ್ರಗ್ಸ್ ಎಂದು ತೋರಿಸಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದರು  ಎಂದು ಮೂಲಗಳು ತಿಳಿಸಿವೆ.

ಆರೋಪಿಗಳ ಮಾತಿನಂತೆ ಹಂತ ಹಂತವಾಗಿ ದೂರುದಾರರು ಒಟ್ಟು 32 ಲಕ್ಷ ವರ್ಗಾಯಿಸಿದ್ದರು. ಬಳಿಕ ರಾಕೇಶ್ ಅವರನ್ನು ಬೈಕ್‌ ನಲ್ಲಿ ಕರೆದೊಯ್ದು ವೀರಸಂದ್ರ ಬಳಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಇದೊಂದು ಪೂರ್ವ ನಿಯೋಜಿಕ ಕೃತ್ಯವಾಗಿತ್ತು. ಉತ್ತರ ಪ್ರದೇಶ ಮೂಲದವಳಾಗಿದ್ದ  ಆರೋಪಿ ಸಂಗೀತಾ ಸಹಾನಿ ಡಾನ್ಸ್ ಬಾರ್ ನಲ್ಲಿ ಈ ಹಿಂದ ಕೆಲಸ ಮಾಡುತ್ತಿದ್ದಳು. ಸಂತ್ರಸ್ತನನ್ನು ಭೇಟಿ ಮಾಡಲು ಬರುವ ವೇಳೆ   ಬ್ಯಾಗ್‌ ನಲ್ಲಿ ಅಡುಗೆ ಸೋಡಾವನ್ನು ಸಂಗೀತಾ ಸಹಾನಿ ಮೊದಲೇ ಬಚ್ಚಿಟ್ಟುಕೊಂಡಿದ್ದಳು. ದೂರುದಾರರನ್ನು ಕೊಠಡಿಗೆ ಕರೆತಂದಾಗ ನಾಟಕವಾಡುವಂತೆ ಪ್ರಕರಣದ ಸೂತ್ರಧಾರ ಶರಣಬಸಪ್ಪ ಬಾಳಿಗೆ‌ ಸೂಚಿಸಿದ್ದ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version