ಮೈಸೂರು: ದಸರಾ ಅಂಬಾರಿ ಆನೆ ಅಭಿಮನ್ಯುವಿನ ದಂತ ಮುರಿತ!
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು ಆನೆಯ ಎಡಭಾಗದ ದಂತ ಸ್ವಲ್ಪ ಮಟ್ಟಿಗೆ ತುಂಡಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ವೇಳೆ ಈ ಘಟನೆ ನಡೆದಿದೆ.
ಇತ್ತೀಚೆಗೆ ದುಬಾರೆ ಆನೆ ಶಿಬಿರದಲ್ಲಿ ನಡೆದ ಆನೆಗಳ ಕಾಳಗದ ದುರಂತದ ಹಿನ್ನೆಲೆಯಲ್ಲಿ, ಪ್ರವಾಸಿಗರಿಗೆ ಸಾಕಾನೆ ಶಿಬಿರಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಸಮಯದಲ್ಲಿ ಮತ್ತಿಗೋಡು ಕ್ಯಾಂಪ್ನಲ್ಲಿ ಮರದ ದಿಮ್ಮಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾಯಿಸುವ ಕೆಲಸ ಪ್ರಗತಿಯಲ್ಲಿತ್ತು. 59 ವರ್ಷದ ಬಲಿಷ್ಠ ಆನೆ ಅಭಿಮನ್ಯು ಮರದ ದಿಮ್ಮಿಯೊಂದನ್ನು ಮೇಲೆತ್ತುವ ಸಂದರ್ಭದಲ್ಲಿ, ಬಲಭಾಗಕ್ಕೆ ಬಾಗಿದಂತಿದ್ದ ಆತನ ಎಡಭಾಗದ ದಂತದ ಮುಂಭಾಗ ತುಂಡಾಗಿದೆ.
ಹೊಸ ಲುಕ್ ನಲ್ಲಿ ಬರಲಿದ್ದಾನೆ ಕ್ಯಾಪ್ಟನ್:
ದಂತ ಮುರಿತದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಯಾವುದೇ ಸ್ಪಷ್ಟ ಅಧಿಕೃತ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ, ಮೂಲಗಳ ಪ್ರಕಾರ ಈ ಬಾರಿಯ ದಸರಾ ಮಹೋತ್ಸವಕ್ಕೆ ಮುನ್ನ ಅಭಿಮನ್ಯುವಿನ ದಂತವನ್ನು ಹೊಸದಾಗಿ ಟ್ರಿಮ್ (ಆಕಾರಗೊಳಿಸಿ) ಮಾಡಿಕೊಂಡು ಬರಲು ನಿರ್ಧರಿಸಲಾಗಿದೆ. ಹಾಗಾಗಿ, ಈ ಬಾರಿ ಕ್ಯಾಪ್ಟನ್ ಅಭಿಮನ್ಯು ದಸರಾ ಮೈದಾನಕ್ಕೆ ಹೊಸ ಲುಕ್ ನಲ್ಲಿ ಲಗ್ಗೆ ಇಡಲಿದ್ದಾನೆ.
ಈ ಸಾಲಿನ ದಸರಾ ಮಹೋತ್ಸವದಲ್ಲೂ ಅಭಿಮನ್ಯುವೇ ಚಿನ್ನದ ಅಂಬಾರಿ ಹೊರಲಿರುವುದು ಖಚಿತವಾಗಿದೆ. 2020 ರಿಂದ ಸತತವಾಗಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿರುವ ಅಭಿಮನ್ಯುಗೆ ಇದು 7ನೇ ಬಾರಿ ಆಗಿರಲಿದೆ. ಈ ಹಿಂದೆ ದ್ರೋಣ 18 ಬಾರಿ, ಬಲರಾಮ 13 ಬಾರಿ ಹಾಗೂ ಅರ್ಜುನ ಸತತ 8 ಬಾರಿ ಅಂಬಾರಿ ಹೊತ್ತು ದಾಖಲೆ ಬರೆದಿದ್ದು, ಆ ಸಾಲಿಗೆ ಈಗ ಅಭಿಮನ್ಯು ಕೂಡ ಸೇರಲಿದ್ದಾನೆ.
ಅಭಿಮನ್ಯುವಿನ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ:
ಸೆರೆ ಹಿಡಿದ ವರ್ಷ: 1970 (ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶ)
ತೂಕ: 5,635 ಕೆಜಿ, ಎತ್ತರ: 2.72 ಮೀಟರ್, ಉದ್ದ: 3.51 ಮೀಟರ್.
ಅನುಭವ: ಕಳೆದ 30 ವರ್ಷಗಳಿಂದ ದಸರಾದಲ್ಲಿ ಭಾಗಿ.
ಬಿರುದುಗಳು: ‘ಕೂಂಬಿಂಗ್ ಸ್ಟಾರ್’, ‘ಕರ್ನಾಟಕದ ಎಕೆ-47’ ಎಂದು ಕರೆಯಲ್ಪಡುವ ಅಭಿಮನ್ಯು, ದೇಶದಲ್ಲೇ ಅತ್ಯಂತ ಬಲಿಷ್ಠ ಆನೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಸದ್ಯ ಮಾವುತರಾದ ಜೆ.ಎಸ್. ವಸಂತ್ ಮತ್ತು ಜೆ.ಕೆ. ರಾಜು ಈತನ ಪಾಲನೆ ಮಾಡುತ್ತಿದ್ದಾರೆ.























