ನಟಿ ಜಯಪ್ರದಾಗೆ ಬಂಧನದ ಭೀತಿ: ಮಾಜಿ ಸಂಸದೆ ವಿರುದ್ಧ ಇರುವ ಆರೋಪವೇನು..?

ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿಯಲ್ಲಿ ವಿಚಾರಣೆಗೆ ಹಾಜರಾಗದಿದ್ದಕ್ಕೆ ಮಾಜಿ ಸಂಸದೆ, ನಟಿ ಜಯಪ್ರದಾ ಅವರು ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಪ್ರಕರಣದ ಕುರಿತು ವಿಚಾರಣೆಗೆ ಉತ್ತರಪ್ರದೇಶದ ರಾಂಪುರದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯವು ಏಳು ಬಾರಿ ಸಮನ್ಸ್ ನೀಡಿದರೂ ಅವರು ಹಾಜರಾಗಿಲ್ಲ. ಹೀಗಾಗಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಅವರನ್ನು ಕೂಡಲೇ ಅರೆಸ್ಟ್ ಮಾಡುವಂತೆ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯವು ಸೂಚನೆ ನೀಡಿದೆ.
1994 ರಲ್ಲಿ ತೆಲುಗು ದೇಶಂ ಪಕ್ಷವನ್ನು ಸೇರಿದ್ದ ಅವರು, ನಂತರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ 2004 ರಿಂದ 2014 ರವರೆಗೆ ಉತ್ತರ ಪ್ರದೇಶದ ರಾಂಪುರದಿಂದ ಸಂಸತ್ತಿನ ಸದಸ್ಯರಾದರು. 2019 ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಜಯಪ್ರದಾ ಅವರನ್ನು ಬಂಧಿಸುವಂತೆ ನ್ಯಾಯಾಲಯವು ಸೂಚಿಸಿದೆ.
ಈ ಮೂಲಕ ನಟಿ, ರಾಜಕಾರಣಿ ಜಯಪ್ರದಾ ಮತ್ತೊಮ್ಮೆ ಕಾನೂನು ತೊಡಕುಗಳಲ್ಲಿ ಸಿಲುಕಿದ್ದಾರೆ. ರಾಂಪುರದ ಎಂಪಿ / ಎಂಎಲ್ಎ ನ್ಯಾಯಾಲಯವು ಇವರನ್ನು ಬಂಧಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಫೆಬ್ರವರಿ 27 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದೆ.