ವಿಮಾನದಲ್ಲಿ ಮಹಿಳೆಗೆ ಮೂರ್ಛೆ ರೋಗ: ಬೆಂಗಳೂರು ಮೂಲದ ವೈದ್ಯರಿಂದ ತುರ್ತು ಸಹಾಯ; ಏರ್ ಇಂಡಿಯಾ ಪ್ರಶಂಸೆ

22/11/2023

ದಿಲ್ಲಿಯಿಂದ ಟೊರೊಂಟೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾರ್ಗ ಮಧ್ಯೆ ಮಹಿಳಾ ಪ್ರಯಾಣಿಕೆರೊಬ್ಬರಿಗೆ ಮೂರ್ಛೆ ರೋಗ ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ ಬೆಂಗಳೂರು ಮೂಲದ ವೈದ್ಯರೊಬ್ಬರು ಆಕೆಗೆ ಚಿಕಿತ್ಸೆ ನೀಡುವ ಮೂಲಕ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ.

ಬೆಂಗಳೂರು ಮೂಲದ ವೈದ್ಯ ಸುಂದರ್ ಶಂಕರನ್ ಅವರ ತ್ವರಿತ ಮತ್ತು ಪರಿಣಾಮಕಾರಿ ಮಧ್ಯಸ್ಥಿಕೆಯಿಂದಾಗಿ ದೆಹಲಿಯಿಂದ ಟೊರೊಂಟೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಅಪಾಯಕ್ಕೆ ಸಿಲುಕಿದ್ದ ಮಹಿಳೆಯ ಜೀವ ಉಳಿದಿದೆ. ಈ ಕುರಿತಂತೆ ಸ್ವತಃ ವೈದ್ಯ ಡಾ. ಸುಂದರ್ ಶಂಕರನ್ ಅವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಸಂದರ್ಭಕ್ಕೆ ಸರಿಯಾಗಿ ಮಹಿಳೆಗೆ ಚಿಕಿತ್ಸೆ ನೀಡಿದ್ದರಿಂದ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

“ನನ್ನ 45 ವರ್ಷಗಳ ವೈದ್ಯಕೀಯ ವೃತ್ತಿಜೀವನದಲ್ಲಿ 3ನೇ ಬಾರಿಗೆ ನಾನು ವಿಮಾನದೊಳಗೆ ಚಿಕಿತ್ಸೆ ನೀಡಿದೆ. ಮೊದಲ ಬಾರಿಗೆ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಐಎಎಫ್ ಅಧಿಕಾರಿಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ನಾನು ತುರ್ತು ಚಿಕಿತ್ಸೆ ನೀಡಿದ ನಂತರ ಅಧಿಕಾರಿಯನ್ನು ತಕ್ಷಣವೇ ಕಮಾಂಡ್ ಹಾಸ್ಪಿಟಲ್ ಏರ್ ಫೋರ್ಸ್‌ಗೆ ಕರೆದೊಯ್ಯಲಾಯಿತು. ಅವರಿಗೆ ಎಂಐಗೆ ಚಿಕಿತ್ಸೆ ನೀಡಲಾಯಿತು. ಬಳಿಕ ಅವರು ಚೇತರಿಸಿಕೊಂಡರು. ವಾಯುಪಡೆಯ ಮುಖ್ಯಸ್ಥರು ನನಗೆ ಧನ್ಯವಾದ ಪತ್ರವನ್ನು ಕಳುಹಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ವೈದ್ಯ ಶಂಕರನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದೆ. “ಆತ್ಮೀಯ ಶಂಕರನ್, ನೀವು ನಿರ್ವಹಿಸಿದ ಪಾತ್ರಕ್ಕಾಗಿ ನಾವು ನಿಮ್ಮನ್ನು ಗೌರವಿಸುತ್ತೇವೆ! ಧನ್ಯವಾದ. ಜನರಿಗಾಗಿ ತಮ್ಮ ಸಹಾಯ ಹಸ್ತ ಚಾಚಲು ಯಾವತ್ತೂ ಹಿಂಜರಿಯದ ನಿಮ್ಮಂತಹ ವ್ಯಕ್ತಿತ್ವ ನಮ್ಮ ನಡುವೆ ಇರುವುದು ಯಾವಾಗಲೂ ಧನ್ಯವೆನಿಸುತ್ತದೆ. ನಮ್ಮ ಸಿಬ್ಬಂದಿ ಬದ್ಧತೆಯನ್ನು ಗಮನಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ನಿಮ್ಮ ಮೆಚ್ಚುಗೆಯನ್ನು ಖಂಡಿತವಾಗಿ ನಾವು ಅವರಿಗೆ ರವಾನಿಸುತ್ತೇವೆ ಎಂದು ಹೇಳಿ ಟ್ವೀಟ್ ಮಾಡಿದೆ.

ಇತ್ತೀಚಿನ ಸುದ್ದಿ

Exit mobile version