10 ವರ್ಷದ ಬಾಲಕನ ಪ್ರಾಣ ಬಲಿಪಡೆದ ಹುಣಸೆ ಹಣ್ಣು!

ಮುಜಾಫರ್ಪುರ: ಹುಣಸೆ ಹಣ್ಣು ತಿಂದ 10 ವರ್ಷದ ಬಾಲಕನೋರ್ವ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಮುಜಾಫರ್ಪುರದ ಸಕ್ರಾದ ಮಚ್ಚಿ ಗ್ರಾಮದ ರಾಜೇಶ್ ಮಹತೋ ಎಂಬವರ ಪುತ್ರ ಆದರ್ಶ್(10) ಹುಣಸೆ ಹಣ್ಣು ತಿಂದಿದ್ದು, ಈ ವೇಳೆ ಆಕಸ್ಮಿಕವಾಗಿ ಹುಣಸೆ ಬೀಜ ನುಂಗಿದ್ದಾನೆ. ಆ ಬಳಿಕ ಉಸಿರಾಡಲು ಸಾಧ್ಯವಾಗದೇ ಅಸ್ವಸ್ಥಗೊಂಡಿದ್ದಾನೆ. ಇದ್ದಕ್ಕಿದ್ದಂತೆಯೇ ಧ್ವನಿಯೂ ನಿಂತು ಹೋಗಿದೆ.
ಕುಟುಂಬದ ಸದಸ್ಯರು ಸ್ಥಳೀಯವಾಗಿ ಮೊದಲು ಚಿಕಿತ್ಸೆ ಕೊಡಿಸಿದರು. ಆದ್ರೆ ಬಾಲಕನ ಸ್ಥಿತಿ ಗಂಭೀರವಾದ ಕಾರಣ ಚಿಕಿತ್ಸೆಗಾಗಿ ಮುಜಾಫರ್ ಪುರಕ್ಕೆ ಕರೆದೊಯ್ದಿದ್ದಾರೆ. ಇಲ್ಲಿನ ವೈದ್ಯರು ಅಲ್ಟ್ರಾಸೌಂಡ್ ನಡೆಸಿದ ಬಳಿಕ ಹುಣಸೆ ಹಣ್ಣಿನ ಮಧ್ಯಭಾಗವು ಆದರ್ಶ್ ಶ್ವಾಸಕೋಶಕ್ಕೆ ಅಂಟಿಕೊಂಡಿದೆ ಎಂದು ತಿಳಿದಿದೆ. ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ, ವೈದ್ಯರು ಮಗುವನ್ನು ಪಾಟ್ನಾಗೆ ಕಳುಹಿಸಿದ್ದಾರೆ.
ಬಾಲಕನ ಪೋಷಕರು ಆದರ್ಶ್ ನನ್ನು ಪಾಟ್ನಾಕ್ಕೆ ಕರೆದೊಯ್ಯಲು ಪ್ರಯತ್ನಿಸಿದರು. ಆದ್ರೆ ಪಾಟ್ನಾ ತಲುಪುವ ದಾರಿ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.