4:57 AM Wednesday 20 - August 2025

ಅಂಜು ಶ್ರೀ ಪಾರ್ವತಿ ಬಿರಿಯಾನಿ ತಿಂದು ಸಾವನ್ನಪ್ಪಿದ್ದಲ್ಲ?! | ಅಂಜು ಶ್ರೀ ಪ್ರಕರಣಕ್ಕೆ ಹೊಸ ಟ್ವಿಸ್ಟ್

anju shree
09/01/2023

ಕಾಸರಗೋಡಿನ ಪೆರಿಂಬಳ ನಿವಾಸಿ 20 ವರ್ಷದ ಅಂಜು ಶ್ರೀ ಪಾರ್ವತಿ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಅಂಜುಶ್ರೀ ಸಾವು ವಿಷಾಹಾರ ಸೇವನೆಯಿಂದ ಸಂಭವಿಸಿಲ್ಲ. ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ಪ್ರಾಥಮಿಕ ವರದಿ ನೀಡಿದ್ದಾರೆ.

ಮಲಯಾಳಂ ಸುದ್ದಿವಾಹಿನಿಯೊಂದು ಈ ಕುರಿತು ವರದಿ ಮಾಡಿದ್ದು, ಅಂಜುಶ್ರೀ ಸಾವು ವಿಷಾಹಾರ ಸೇವನೆಯಿಂದ ನಡೆದಿರೋದಲ್ಲ, ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೇಳಲಾಗಿದೆ.

ಅಂಜುಶ್ರೀ ಕಾಸರಗೋಡಿನ ಕುಝಿಮಂದಿ ಅನ್ನೋ ಹೋಟೇಲ್ ನಿಂದ ಆನ್ ಲೈನ್ ಮೂಲಕ ಬಿರಿಯಾನಿ‌ ಆರ್ಡರ್ ಮಾಡಿ ತರಿಸಿ ತಿಂದಿದ್ದರು. ಕೆಲ ಗಂಟೆಗಳ ಬಳಿಕ‌ ಆಕೆ ಅಸ್ವಸ್ಥಳಾದ ಹಿನ್ನಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ‌ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅಂಜುಶ್ರೀ ಸಾವನ್ನಪ್ಪಿದ್ದಳು. ಈ ಘಟನೆಗೆ ಸಂಬಂಧಿಸಿದಂತೆ ಈ ಸಾವಿನ ತನಿಖೆಯನ್ನು ನಡೆಸಲು ಕೇರಳ‌ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆಹಾರ ಸುರಕ್ಷತಾ ಆಯುಕ್ತರಿಗೆ ಆದೇಶಿಸಿದ್ದರು.

ಆದರೆ ಇದೀಗ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಲಭಿಸುತ್ತಿದ್ದು, ಪ್ರಕರಣವು ಗೊಂದಲದ ಗೂಡಾಗಿ ಪರಿಣಮಿಸಿದೆ. ಅಂಜು ಶ್ರೀ ಪಾರ್ವತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಪೊಲೀಸರು ಆಕೆಯ ಮೊಬೈಲ್ ಪರಿಶೀಲನೆ ಮಾಡಿದ್ದು, ಈ ವೇಳೆ ಅಂಜು ಶ್ರೀ ಮಾನಸಿಕ ಒತ್ತಡದಲ್ಲಿದ್ದಳು ಎನ್ನುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ ಎಂದು ವರದಿಯಾಗಿದೆ.

ಯುವತಿಯ ಸಾವಿಗೆ ಕಾರಣವಾಗಿರುವ ವಿಷ ಯಾವುದು ಅನ್ನೋದರ ಪತ್ತೆಯನ್ನು ಕೋಝೀಕ್ಕೋಡ್ ನ ಫಾರೆನ್ಸಿಕ್ ಲ್ಯಾಬ್ ನಲ್ಲಿ ನಡೆಸಲಾಗುತ್ತಿದೆ. ಈ ವರದಿ ಬಂದರೆ ಆಕೆಯ ಸಾವಿಗೆ ಸ್ಪಷ್ಟವಾದ ಕಾರಣಗಳು ಲಭ್ಯವಾಗಲಿದೆ.

ಅಂಜುಶ್ರೀ ಆಹಾರ ಸೇವಿಸಿ ಅಸ್ವಸ್ಥಳಾಗಿದ ದಿನ ಅಂಜುಶ್ರೀ ಮಾತ್ರವಲ್ಲದೇ ನಾಲ್ಕು ಜನರು ಇದೇ ಹೊಟೇಲ್ ನಿಂದ ಸರಬರಾಜಾಗಿದ್ದ ಆಹಾರ ಸೇವಿಸಿ ಹಲವರು ಅಸ್ವಸ್ಥರಾಗಿದ್ದರು. ಓರ್ವಳು ಯುವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದುಕೊಂಡಿದ್ದಳು. ಈ ವಿಚಾರವನ್ನು ಕೂಡ ತನಿಖೆಯ ವೇಳೆ ಗಮನಿಸಬೇಕು ಎಂದು ಅಂಜುಶ್ರೀಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಆತ್ಮಹತ್ಯೆಯ ಅನುಮಾನ ಬಂದಿದ್ದು ಹೇಗೆ?

ವಿಷಾಹಾರ ಸೇವನೆ ಮಾಡಿ ಅಸ್ವಸ್ಥವಾದರೆ, ಅಂತಹವರಲ್ಲಿ ಕೆಲವೊಂದು ಅಸ್ವಸ್ಥತೆಯ ಲಕ್ಷಣಗಳು ಇರುತ್ತವೆ. ಆದರೆ ಅಂತಹ ಯಾವುದೇ ಲಕ್ಷಣಗಳು ಅಂಜು ಶ್ರೀಯಲ್ಲಿ ಕಂಡು ಬಂದಿರಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದರು. ಹೀಗಾಗಿ ಪೊಲೀಸರು ಬೇರೆ ಆಯಾಮಗಳಲ್ಲಿ ಕೂಡ ತನಿಖೆ ನಡೆಸಿದ್ದರು. ಮೊಬೈಲ್ ಪರಿಶೀಲನೆಯ ವೇಳೆ ಅಂಜುಶ್ರೀ ಮಾನಸಿಕ ಒತ್ತಡದಲ್ಲಿದ್ದಳು ಅನ್ನೋದರ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಇನ್ನಷ್ಟು ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version