ಸಹೋದ್ಯೋಗಿಯ ಮಗಳ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳ ಬಂಧನ

stop rape
16/03/2024

ಮುಂಬೈ: ಸಹೋದ್ಯೋಗಿಯ 15 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ಕೋಸ್ಟ್ ಗಾರ್ಡ್ ನ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ.

ಕಳೆದ ವರ್ಷ ಅಕ್ಟೋಬರ್ 17ರಂದು ನಗರದ ಉತ್ತರ ಉಪನಗರದಲ್ಲಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಯಲ್ಲಿ ಈ ಘಟನೆ ನಡೆದಿತ್ತು. ಬಾಲಕಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆರೋಪಿಗಳು 30 ಮತ್ತು 23 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂತ್ರಸ್ತೆಯು ತನ್ನ ಕೋಚಿಂಗ್ ಕ್ಲಾಸ್ ನಿಂದ ಹಿಂತಿರುಗಿದ್ದು, ಇದೇ ವೇಳೆ ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿದ ಒಬ್ಬ ಆರೋಪಿಯು ನನ್ನ ಹೆಂಡತಿ ನಿನ್ನನ್ನು ಮನೆಗೆ ಕರೆದಿದ್ದಾಳೆ ಎಂದು ಬಾಲಕಿಯನ್ನು ನಂಬಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ.

ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂದವ್ಯ ಹೊಂದಿದ್ದ ಕಾರಣ ಬಾಲಕಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ಬಾಲಕಿಯು ಆರೋಪಿಯ ಫ್ಲ್ಯಾಟ್ ಗೆ ಪ್ರವೇಶಿಸಿದಾಗ ಒಳಗೆ ಕಾಯುತ್ತಿದ್ದ ಎರಡನೇ ಆರೋಪಿಯು ಆಕೆಯನ್ನು ಬಲವಂತವಾಗಿ ಕೋಣೆಗೆ ಎಳೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ, ಲೈಂಗಿಕ ದೌರ್ಜನ್ಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ನಿನ್ನನ್ನು ಮತ್ತು ನಿನ್ನ ತಂದೆಯನ್ನು ಕೊಲ್ಲುವುದಾಗಿ ಬಾಲಕಿಗೆ ಬೆದರಿಕೆಯನ್ನು ಕೂಡ ಹಾಕಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅತ್ಯಾಚಾರ ನಡೆದ ಬಳಿಕ ಮಾನಸಿಕವಾಗಿ ಖಿನ್ನತೆಗೆ ಜಾರಿದ್ದು, ನಂತರ ಸುಧಾರಿಸಿಕೊಂಡು ಎರಡು ತಿಂಗಳ ಬಳಿಕ, ಬಾಲಕಿಯು ತನ್ನ ತಾಯಿಯ ಮುಂದೆ ಆಕೆ ಅನುಭವಿಸಿದ ನೋವನ್ನು ತಿಳಿಸಿದಳು. ಆಕೆ ಬಾಲಕಿಯ ತಂದೆಗೆ ಮಾಹಿತಿ ನೀಡಿದ್ದು, ಅವರು ಭಾರತೀಯ ಕೋಸ್ಟ್ ಗಾರ್ಡ್ ಗೆ ಆಂತರಿಕ ದೂರು ದಾಖಲಿಸಿದ್ದಾರೆ.

ನಂತರ ಮಾರ್ಚ್ 8 ರಂದು, ಬಾಲಕಿಯು ಕೋಸ್ಟ್ ಗಾರ್ಡ್ ನ ಹಿರಿಯ ಅಧಿಕಾರಿಗಳಿಗೆ ತನಗಾದ ಕಿರುಕುಳದ ಬಗ್ಗೆ ಪತ್ರ ಬರೆದಿದ್ದು, ಅವರ ಸಹಾಯದಿಂದ ಬಾಲಕಿಯು ಪೊಲೀಸ್ ದೂರು ನೀಡಿದ್ದು, ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376ಡಿಎ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ

Exit mobile version