ಚಹಾ ಕಪ್ ರಸ್ತೆಗೆ ಎಸೆಯಬೇಡಿ ಎಂದ ಪೌರಕಾರ್ಮಿಕನ ಮೇಲೆ ಹಲ್ಲೆಗೆ ಯತ್ನ: ಕೇರಳ ಮೂಲದ ಮಹಿಳೆ ಮತ್ತು ಗೆಳೆಯ ಪೊಲೀಸ್ ವಶಕ್ಕೆ
ಬೆಂಗಳೂರು: ಚಹಾ ಕುಡಿದ ಕಪ್ ಅನ್ನು ರಸ್ತೆಬದಿಯಲ್ಲಿ ಎಸೆಯಬೇಡಿ ಎಂದು ಸೌಜನ್ಯದಿಂದ ಸೂಚಿಸಿದ ಜಿಬಿಎ (GBA) ಪೌರಕಾರ್ಮಿಕ ಸಿಬ್ಬಂದಿಯೊಬ್ಬರ ಮೇಲೆ ಮಹಿಳೆಯೊಬ್ಬಳು ಕಲ್ಲಿನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪಟ್ಟಂದೂರು ಅಗ್ರಹಾರದ ಕುವೆಂಪು ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಕೇರಳ ಮೂಲದ ವೈದೇಹಿ ಎಂಬ ಮಹಿಳೆ ಹಾಗೂ ಆಕೆಯ ಸ್ನೇಹಿತನನ್ನು ವೈಟ್‌ಫೀಲ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮಹಿಳೆ ತನ್ನ ಗೆಳೆಯನೊಂದಿಗೆ ಕುಳಿತು ಚಹಾ ಸೇವಿಸಿದ ಬಳಿಕ, ಅದರ ಕಪ್ ಅನ್ನು ರಸ್ತೆಬದಿಯಲ್ಲೇ ಎಸೆದಿದ್ದರು. ಇದನ್ನು ಗಮನಿಸಿದ ಕರ್ತವ್ಯನಿರತ ಪೌರಕಾರ್ಮಿಕ ಸಿಬ್ಬಂದಿಯು ಕಸವನ್ನು ಕಸದ ಡಬ್ಬದಲ್ಲಿ ಹಾಕುವಂತೆ ವಿನಂತಿಸಿದ್ದರು. ಆದರೆ, ಇದರಿಂದ ಕೋಪಗೊಂಡ ಮಹಿಳೆ ಪೌರಕಾರ್ಮಿಕ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ಈ ಸಂಪೂರ್ಣ ರಂಪಾಟದ ದೃಶ್ಯಗಳು ಸ್ಥಳೀಯರ ಮೊಬೈಲ್ ಫೋನ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೌರಕಾರ್ಮಿಕ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ವೈಟ್‌ಫೀಲ್ಡ್ ಠಾಣೆ ಪೊಲೀಸರು, ಆರೋಪಿ ಮಹಿಳೆ ಹಾಗೂ ಆಕೆಯ ಸ್ನೇಹಿತನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























